ಉಪ್ಪಿನಬೆಟಗೇರಿ: ಮುಂಗಾರು ಹಂಗಾಮಿನ ಬಿತ್ತನೆ ಮುಗಿದು ಈಗಾಗಲೇ ಹದಿನೈದು ದಿನಗಳಾಗಿದ್ದು, ರೈತರು ಕೃಷಿ ಭೂಮಿಯಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ನಾಶಕ್ಕೆ ಎಡೆ ಹೊಡೆಯಲು ಎತ್ತಿಗೆ ನಾಲ ಕಟ್ಟುವುದು ಹಾಗೂ ಎಡೆ ಕುಂಟಿ ಸೇರಿ ಇನ್ನಿತರ ಸಲಕರಣೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ಉಪ್ಪಿನಬೆಟಗೇರಿ, ಕೊಟಬಾಗಿ, ಲೋಕೂರ, ಯಾದವಾಡ, ಹಾರೋಬೆಳವಡಿ, ಕರಡಿಗುಡ್ಡ, ಮರೇವಾಡ, ಅಮ್ಮಿನಬಾವಿ ಭಾಗದಲ್ಲಿ ಬಹುತೇಕ ಬಿತ್ತನೆ ಮುಗಿದಿದೆ. ನರೇಂದ್ರ, ಗರಗ, ತಡಕೋಡ, ಮಾದನಬಾವಿ, ತೇಗೂರ, ಕೋಟೂರಲ್ಲಿ ಸಾದಾರಣ ಮಳೆಯಾಗಿದೆ. ಕೆಲವು ಕಡೆ ತೇವಾಂಶದ ಕೊರತೆಯಿಂದ ಬಿತ್ತಿದ ಬೀಜ ಮೊಳಕೆಯೊಡೆಯದ ಕಾರಣ ಮುರಿದು ಮತ್ತೆ ಬಿತ್ತಲಾಗಿದೆ.
ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದರಿಂದ ತೇವಾಂಶ ಹೆಚ್ಚಾಗಿದೆ. ಕೆಲ ರೈತರು ಬಿತ್ತನೆಗಾಗಿ ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಇನ್ನೂ ಕೆಲವು ರೈತರು ಕೊಳವೆಬಾವಿ ಮೂಲಕ ನೀರುಣಿಸಿ ಬಿತ್ತಿದ್ದಾರೆ.
ಹೆಸರು, ಉದ್ದು, ಸೋಯಾಬಿನ್, ತೊಗರಿ, ಶೇಂಗಾ ಬಿತ್ತನೆ ಮಾಡಲಾಗಿದ್ದು, ಬೀಜ ಮೊಳಕೆಯೊಡೆದು ಎರಡ್ಮೂರು ಎಲೆಗಳಾಗಿವೆ. ಇವುಗಳ ನಡುವೆ ಕಳೆ ಬೆಳೆಯುತ್ತಿದ್ದು, ರೈತರು ಈಗ ಕಳೆ ನಾಶಕ್ಕೆ ಮುಂದಾಗಿದ್ದಾರೆ.
ರೈತಾಪಿ ಜನರು ಎತ್ತುಗಳ ಕಾಲಿಗೆ ಕಳಗ ಮತ್ತು ನಾಲ ಕಟ್ಟಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹದ ಬಂದ ನಂತರ ಕಳೆ ನಾಶಕ್ಕೆ ಎಡೆ ಹೊಡೆಯುತ್ತೇವೆ.– ವೀರೇಶ ಗೆದ್ದಿಕೇರಿ, ರೈತ ಪುಡಕಲಕಟ್ಟಿ
ನಾಲ ಕಟ್ಟುವುದು ನಮ್ಮ ಕುಲ ಕಸುಬು. ಸಂತೆಯಲ್ಲಿ ಇಲ್ಲವೇ ರೈತರ ಮನೆಗೆ ಹೋಗಿ ಜಾನುವಾರುಗಳ ಕಾಲಿಗೆ ಕಳಗ ನಾಲ ಕಟ್ಟಿ ಕೊಡುತ್ತೇವೆ.– ಫಯಾಜ್ ನಾಲಬಂದಿ, ಧಾರವಾಡ
‘ಹದ ಬರುವುದು ಕಾಯುತ್ತಿದ್ದೇವೆ’
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಭೂಮಿ ತೇವಾಂಶದಿಂದ ಕೂಡಿದ್ದು ಎಡೆ ಹೊಡೆಯಲು ಸಾಧ್ಯವಾಗುತ್ತಿಲ್ಲ. ರೈತರು ಜಮೀನು ಹದ ಬರುವುದನ್ನು ಕಾಯುತ್ತಿದ್ದಾರೆ. ಮಳೆ ಬಿಡುವು ಕೊಟ್ಟರೆ ಕೃಷಿ ಚಟುವಟಿಕೆ ಮತ್ತೆ ಗರಿಗೆದರುತ್ತದೆ ಎಂದ ರೈತ ಬಸಪ್ಪ ಹೆಬ್ಬಳ್ಳಿ ಹೇಳಿದರು.
ಒಂದು ಎತ್ತಿನ ಕಾಲಿಗೆ ಕಳಗ ಕಟ್ಟಲು ₹150ರಿಂದ ₹200 ನಾಲ ಕಟ್ಟಲು ಒಂದು ಎತ್ತಿಗೆ ₹400 ರಿಂದ ₹450 ಪಡೆಯುತ್ತಾರೆ. ತಿಂಗಳಿಗೊಮ್ಮೆ ಕಳಗ ಕಟ್ಟುವುದು ಮತ್ತು ನಾಲ ಕಟ್ಟುವುದರಿಂದ ಜಾನುವಾರುಗಳ ಕಾಲಿನ ಉಗುರಿನ ತುದಿಗೆ ಗಾಯವಾಗುವುದು ತಪ್ಪುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.