ಉಪ್ಪಿನಬೆಟಗೇರಿ: ‘ದುಷ್ಟ ಶಕ್ತಿಗಳು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆಮಾಚುವ ಕೆಲಸದಲ್ಲಿ ತೊಡಗಿವೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಆರ್.ಎಸ್.ಎಸ್. ವತಿಯಿಂದ ಧಾರವಾಡ ಗ್ರಾಮಾಂತರ ತಾಲ್ಲೂಕು ವಿಜಯದಶಮಿ ಉತ್ಸವ ಮತ್ತು ಪಥಸಂಚಲನ ನಂತರ ಜಯಕೀರ್ತಿ ಸಮುದಾಯ ಭವನದ ಆವರಣದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದುಷ್ಟರ ಸಂಹಾರಕ್ಕೆ ಮಾತ್ರ ಆಯುಧ ಉಪಯೋಗಿಸಬೇಕೆಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ ಹೊರತು ಶಕ್ತಿ ಪ್ರದರ್ಶಿಸಲು ಅಲ್ಲ. ಚೀನಾ ಯುದ್ಧದಲ್ಲಿ ಕಮ್ಯುನಿಸ್ಟರ ಬಂಡವಾಳ ಏನು, ಆರ್.ಎಸ್.ಎಸ್. ಮಹಿಮೆ ಏನೆಂಬುದನ್ನು ಅರಿತ ಜವಾಹರಲಾಲ್ ನೆಹರೂ ಅವರು, ಜ.26ರ ಪಥಸಂಚಲನಕ್ಕೆ ಸಂಘವನ್ನು ಆಹ್ವಾನಿಸಿದ್ದರು’ ಎಂದರು.
ಧಾರವಾಡದ ಸಾಹಿತಿ ಪ್ರಕಾಶ ಭಟ್ ಮಾತನಾಡಿ, ‘ಹಳ್ಳಿಯ ಜನರ ಜತೆ ಬೆರೆತು ಅವರ ಕಷ್ಟ ಆಲಿಸಬೇಕು. ಕಾರ್ಯಕ್ರಮಗಳ ಮೂಲಕ ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಹಳ್ಳಿಗರನ್ನು ಗೌರವಯುತವಾಗಿ ಕಾಣಬೇಕು. ಹಳ್ಳಿಗಳು ಇದ್ದರೆ ಮಾತ್ರ ನಗರಗಳು ಇರಲು ಸಾಧ್ಯ’ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅಮೃತ ದೇಸಾಯಿ, ನಿಜನಗೌಡ ಪಾಟೀಲ, ಶಂಕರ ಮುಗದ, ಜಯಕೀರ್ತ ಕಟ್ಟಿ, ನಾಗರಾಜ ಗಾಣಿಗೇರ, ಶಶಿಮೌಳಿ ಕುಲಕರ್ಣಿ, ಮಹೇಶ ಯಲಿಗಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.