ADVERTISEMENT

ಧಾರವಾಡ: ಯೂರಿಯಾ ಒದಗಿಸಲು ರಾಜ್ಯ ಸರ್ಕಾರ ವಿಫಲ; ಜೆಡಿಎಸ್ ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:45 IST
Last Updated 1 ಆಗಸ್ಟ್ 2025, 4:45 IST
ಗುರುರಾಜ ಹುಣಸಿಮರದ
ಗುರುರಾಜ ಹುಣಸಿಮರದ   

ಧಾರವಾಡ: ಯೂರಿಯಾ ರಸಗೊಬ್ಬರದ ಕೊರತೆ ನಿವಾರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಬೇಡಿಕೆಗೆ ತಕ್ಕಷ್ಟು ಯೂರಿಯಾ ತರಿಸಿಲ್ಲ ಎಂದು ಮಹಾನಗರ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿದ್ದು, ಶೇ 90 ಕ್ಕಿಂತ ಹೆಚ್ಚು ಬಿತ್ತನೆಯಾಗಿದೆ. ಆದ್ದರಿಂದ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಗೊಬ್ಬರವನ್ನು ದಾಸ್ತಾನು ಹಾಗೂ ಸಮರ್ಪಕ ವಿತರಣೆ ನಿಟ್ಟಿನಲ್ಲಿ ಕೃಷಿ ಸಚಿವರು ವಿಫಲವಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡಿರುವ ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಕ್ರಮ ವಹಿಸುತ್ತಿಲ್ಲ ಎಂದು ದೂರಿದರು. 

ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯು ಉತ್ತರ ಕರ್ನಾಟಕದ ಪ್ರಮುಖ ಕುಡಿಯುವ ನೀರಿನ ಯೋಜನೆಯಾಗಿದೆ. ಇದನ್ನು ಅನುಷ್ಠಾನಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳ ಸಭೆ ನಡೆಸಲು ಸೀಮಿತವಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಿಲ್ಲ. ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾರುತಿ ಹಿಂಡಸಗೇರಿ, ಭೀಮರಾಮ ಗುಳೆದಕಟ್ಟಿ, ಬಸವರಾಜ ಕುರಟ್ಟಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.