ADVERTISEMENT

ಸಚಿವ ಅನುರಾಗ್ ಠಾಕೂರ್ ಬಂಧಿಸಲು ಆಗ್ರಹ

ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 11:30 IST
Last Updated 4 ಫೆಬ್ರುವರಿ 2020, 11:30 IST

ಹುಬ್ಬಳ್ಳಿ: ‘ದೆಹಲಿಯ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಿ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಸಂವಿಧಾನ ಸುರಕ್ಷಾ ಸಮಿತಿ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ ಒತ್ತಾಯಿಸಿದರು.

‘ಸಿಎಎ, ಎನ್‌ಪಿಆರ್‌ ಹಾಗೂ ಎನ್‌ಆರ್‌ಸಿ ವಿರುದ್ಧ ರಾಜಧಾನಿ ದೆಹಲಿ ಸೇರಿದಂತೆ, ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಘಟನೆಗಳು ಸಂಭವಿಸಿವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನಾ ಪ್ರದೇಶದಲ್ಲಿ ಭಯದ ವಾತಾವರಣವನ್ನು ಬಿಜೆಪಿ ನಿರ್ಮಾಣ ಮಾಡಿದೆ. ಸಚಿವರು, ಮುಖ್ಯಮಂತ್ರಿಗಳು ಹಾಗೂ ಆರ್‌ಎಸ್‌ಎಸ್‌ ಮುಖಂಡರು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳಿಂದಾಗಿ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರನ್ನೊಳಗೊಂಡ ಪ್ರತಿಭಟನಾಕಾರರ ಮೇಲೆ ಪೊಲೀಸರ ಸಮ್ಮುಖದಲ್ಲೇ ಗುಂಡಿನ ದಾಳಿ ನಡೆಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.

ADVERTISEMENT

ಸಮಿತಿಯ ಕಾರ್ಯಾಧ್ಯಕ್ಷ ಅನ್ವರ ಮುಧೋಳ ಮಾತನಾಡಿ, ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ವಿರುದ್ಧ ರಾಜ್ಯದ ಸಂಸದ ಅನಂತಕುಮಾರ ಹೆಗಡೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಸರ್ಕಾರದ ಭಾಗವಾಗಿರುವವರು ಜಾತಿ ಮತ್ತು ಧರ್ಮಗಳ ಮಧ್ಯೆ ಸಂಘರ್ಷ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ, ಬಿಜೆಪಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಕುಳಿತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಚೋದನಾಕಾರಿ ಹೇಳಿಕೆ ನೀಡಿದ ಸಚಿವ ಅನುರಾಗ್ ಠಾಕೂರ್ ಅವರನ್ನು ಕೇಂದ್ರ ಸರ್ಕಾರ ಸಂಪುಟದಿಂದ ಕೂಡಲೇ ಕೈಬಿಡಬೇಕು. ಮುಂದೆ ಯಾರೂ ಈ ರೀತಿಯ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಶಾಕೀರ್ ಸನದಿ, ಬಾಬಾಜಾನ್ ಮುಧೋಳ, ರಾಜಶೇಖರ ಮೆಣಸಿನಕಾಯಿ, ಮೋಹನ ಹಿರೇಮನಿ, ಅಶ್ರಫ್ ಅಲಿ ಹಾಗೂ ಇಮ್ತಿಯಾಜ್ ಬಿಳಿಪಸಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.