ADVERTISEMENT

ಉತ್ತರ ಕನ್ನಡದ ಸೊಸೆಯಾದ ಸಾವಿತ್ರಿ

ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಮಗಳು

ಕೃಷ್ಣಿ ಶಿರೂರ
Published 14 ಆಗಸ್ಟ್ 2020, 14:30 IST
Last Updated 14 ಆಗಸ್ಟ್ 2020, 14:30 IST
ಹುಬ್ಬಳ್ಳಿಯ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಸದನದಲ್ಲಿ ಶುಕ್ರವಾರ ನೆರವೇರಿದ ಸಾವಿತ್ರಿ–ರೇವಂತ ಅವರ ಮದುವೆಯಲ್ಲಿ ಸಚಿವ ಜಗದೀಶ ಶೆಟ್ಟರ್‌ ನೂತನ ವಧು–ವರರನ್ನು ಹಾರೈಸಿದರು. ರಘು ಅಕ್ಮಂಜಿ, ಸು.ರಾಮಣ್ಣ, ಮಂಗೇಶ ಭೆಂಡೆ, ಶಿಲ್ಪಾ ಶೆಟ್ಟರ್‌ ಇದ್ದಾರೆ
ಹುಬ್ಬಳ್ಳಿಯ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಸದನದಲ್ಲಿ ಶುಕ್ರವಾರ ನೆರವೇರಿದ ಸಾವಿತ್ರಿ–ರೇವಂತ ಅವರ ಮದುವೆಯಲ್ಲಿ ಸಚಿವ ಜಗದೀಶ ಶೆಟ್ಟರ್‌ ನೂತನ ವಧು–ವರರನ್ನು ಹಾರೈಸಿದರು. ರಘು ಅಕ್ಮಂಜಿ, ಸು.ರಾಮಣ್ಣ, ಮಂಗೇಶ ಭೆಂಡೆ, ಶಿಲ್ಪಾ ಶೆಟ್ಟರ್‌ ಇದ್ದಾರೆ   

ಹುಬ್ಬಳ್ಳಿ: ವಧು, ಸೇವಾಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಮಗಳು; ವರ, ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಸದನದಲ್ಲಿ ಇವರಿಬ್ಬರು ಶುಕ್ರವಾರ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಸಾವಿತ್ರಿ (ಸಹನಾ) ಹಾಗೂ ಕುಮಟಾದ ಸೀತಾರಾಮ ಭಟ್ಟ ಮತ್ತು ಸಾವಿತ್ರಿ ದಂಪತಿಯ ಪುತ್ರ ರೇವಂತ ಅವರ ವಿವಾಹ ಶಾಸ್ತ್ರೋಕ್ತವಾಗಿ, ಸರಳವಾಗಿ ನೆರವೇರಿತು. ಗೋವಿಂದ ಜೋಶಿ, ಕಮಲಾ ಜೋಶಿ ದಂಪತಿ ಸಾವಿತ್ರಿಯ ತಂದೆ–ತಾಯಿ ಸ್ಥಾನದಲ್ಲಿದ್ದು ಧಾರೆ ಎರೆದರು. ಕೊರೊನಾ ಹಿನ್ನೆಲೆಯಲ್ಲಿ ವಧುವಿನ ಕಡೆಯಿಂದ 20 ಮಂದಿ, ವರನ ಕಡೆಯಿಂದ 10 ಮಂದಿ ಮಾತ್ರ ಪಾಲ್ಗೊಂಡಿದ್ದರು.

ವಧುವಿನ ತವರುಮನೆ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ನಾಲ್ಕು ದಿನಗಳಿಂದಲೇ ಮದುವೆ ಸಂಭ್ರಮ ಮನೆಮಾಡಿತ್ತು. ಆ.11ರಂದು ಮೆಹಂದಿ ಶಾಸ್ತ್ರ, 13ರಂದು ಬೆಳಿಗ್ಗೆ ಎಣ್ಣೆ ನೀರು, ಅರಿಸಿನ ಶಾಸ್ತ್ರ, ರುದ್ರಾಭಿಷೇಕ, ಪುಣ್ಯಾರ್ಚನೆ, ಒಳಕಲ್ಲು ಶಾಸ್ತ್ರ ನಡೆದವು. ಮನೆ ಮಗಳ ಮದುವೆ ಸಿದ್ಧತೆಯಲ್ಲಿ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಸಮಿತಿ ಸದಸ್ಯರು, ಮಹಿಳೆಯರೂ ಅಷ್ಟೇ ಲವಲವಿಕೆ, ಉತ್ಸಾಹದಿಂದ ತೊಡಗಿಕೊಂಡರು.

ADVERTISEMENT

ಸಾವಿತ್ರಿ ಆರು ತಿಂಗಳು ಮಗುವಾಗಿದ್ದಾಗ ಆಶ್ರಯ ನೀಡಿದ ಮಾತೃಛಾಯಾ ಬಾಲಕಲ್ಯಾಣ ಕೇಂದ್ರ ಬಿ.ಕಾಂ ವರೆಗಿನ ಶಿಕ್ಷಣವನ್ನು ನೀಡಿ ಪೋಷಿಸಿದೆ. ಈವರೆಗೂ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರಸೇವಿಕಾ ಸಮಿತಿಯ ಶಾರೀರಿಕ ಸಪ್ರಮುಖರಾಗಿ ಬೀದರಿನಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ.

21 ವರ್ಷಗಳಿಂದ ಅನಾಥ ಹೆಣ್ಣು ಮಕ್ಕಳ ಪಾಲಿಗೆ ತವರು ಮನೆಯಾಗಿ ಮಾತಾಜಿ ಪ್ರೀತಿ, ವಸತಿ, ಶಿಕ್ಷಣ, ಸಂಸ್ಕಾರವನ್ನು ನೀಡುತ್ತ ಬಂದಿರುವ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದಲ್ಲಿ ಇದು ಐದನೇ ಶುಭಕಾರ್ಯ. ಇದುವರೆಗೆ ಇಲ್ಲಿ ಬೆಳೆದ ನಾಲ್ವರು ಯುವತಿಯರು ಮದುವೆಯಾಗಿ ಗಂಡನ ಮನೆ ಬೆಳಗಿದ್ದಾರೆ.

ಮದುವೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಹಿರಿಯ ಪ್ರಚಾರಕ ಸು.ರಾಮಣ್ಣ, ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ, ಸೇವಾಭಾರತಿ ಟ್ರಸ್ಟ್‌ನ ರಘು ಅಕ್ಮಂಜಿ, ಸೇವಾಸದನದ ವಿಶ್ವಸ್ಥರು ವಧು–ವರರನ್ನು ಹಾರೈಸಿದರು. ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಸಮಿತಿ ಸದಸ್ಯರಾದಶಿಲ್ಪಾ ಶೆಟ್ಟರ್‌, ಭಾರತಿ ನಂದಕುಮಾರ, ವೀಣಾ ಮಳಿಯೆ, ಮಂಜುಳಾ ಕೃಷ್ಣನ್‌, ಸವಿತಾ ಕರಮರಿ, ರತ್ನಾ ಮಾತಾಜಿ ಮದುವೆ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.