ಹುಬ್ಬಳ್ಳಿ: ‘ಇಲ್ಲಿನ ನೆಹರೂ ಮೈದಾನದಲ್ಲಿ ಸೆ.19ರಂದು ನಡೆಯುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆಯ ಒಂದು ಸಾವಿರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳ ಜನರಿಗೆ ಇದು ಅಸ್ಥಿತ್ವದ ಪ್ರಶ್ನೆಯಾಗಿದ್ದು, ಎಲ್ಲ ರಂಗಗಳಲ್ಲಿ ಬಲಿಷ್ಠವಾಗಬೇಕಾದರೆ ಸಮಾಜದವರು ಒಗ್ಗಟ್ಟು ತೋರಿಸುವುದು ಅನಿವಾರ್ಯ. ಸಾರ್ವಜನಿಕರು ಅಂದು ಮಧ್ಯಾಹ್ನ 12 ಗಂಟೆ ಒಳಗೆ ನೆಹರೂ ಮೈದಾನಕ್ಕೆ ಬರಬೇಕು’ ಎಂದು ತಿಳಿಸಿದರು.
‘ಮಠಾಧೀಶರಿಗೆ ಮೂರು ಸಾವಿರ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಮಠಾಧೀಶರು ಸಂಪರ್ಕಿಸಿದರೆ ಅವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಮೂರು ಸಾವಿರ ಮಠದಿಂದ ನೆಹರೂ ಮೈದಾನದದವರೆಗೆ ಪಾದಯಾತ್ರೆ ನಡೆಯಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಗುರು, ವಿರಕ್ತ ಮಠಾಧೀಶರ ಜತೆಗೆ ಎಲ್ಲ ವರ್ಗಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ವೀರಶೈವ ಲಿಂಗಾಯತ ಒಂದು ಎನ್ನುವವರು ಅಂದು ಬರಬೇಕು. ಜಾತಿ ಗಣತಿಯಲ್ಲಿ ಏನು ನಮೂದಿಸಬೇಕು ಎಂಬ ಬಗ್ಗೆ ಸಮಾವೇಶದಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಸವ ಸಂಸ್ಕೃತಿ ಯಾತ್ರೆ ನಡೆಸುತ್ತಿರುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗಿದೆ. ನಾವು ಎಲ್ಲರೊಂದಿಗೆ ಚರ್ಚೆ ನಡೆಸಿ, ಗೊಂದಲ ನಿವಾರಿಸಲು ಏಕತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ಶಕ್ತಿ ಪ್ರದರ್ಶನಕ್ಕೆ ನಡೆಸುತ್ತಿರುವ ಸಮಾವೇಶ ಅಲ್ಲ’ ಎಂದರು.
‘ಇದು ಬೇಡ ಜಂಗಮ ಸಮಾವೇಶ’ ಎಂಬ ವಚನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾವುದೇ ಸಮಾವೇಶ ನಡೆದ ಸಂದರ್ಭದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯ ಸಹಜ. ಈ ಸಮಾವೇಶದಲ್ಲಿ ಪಂಚಮಸಾಲಿ ಸಮಾಜದವರು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಒಂದು ಜಾತಿಗೆ ಮೀಸಲಾದ ಸಮಾವೇಶ ಅಲ್ಲ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಹಾವೇರಿಯ ಸದಾಶೀವ ಸ್ವಾಮೀಜಿ, ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಅಮೀನಗಡದ ಶಂಕರ ರಾಜೇಂದ್ರ ಸ್ವಾಮೀಜಿ, ನೀಲಗುಂದದ ಚೆನ್ನಬಸವ ಶಿವಯೋಗಿಗಳು, ಕುಕನೂರಿನ ಚೆನ್ನಮಲ್ಲ ಸ್ವಾಮೀಜಿ, ಚೀಕಲಪರವಿಯ ಸದಾಶಿವ ಸ್ವಾಮೀಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.