ADVERTISEMENT

ಹುಬ್ಬಳ್ಳಿ: ವೀರಶೈವ ಲಿಂಗಾಯತ ಏಕತಾ ಸಮಾವೇಶ 19ರಂದು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:25 IST
Last Updated 7 ಸೆಪ್ಟೆಂಬರ್ 2025, 7:25 IST
ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಪ್ರತ್ಯೇಕ ಲಿಂಗಾಯತ ಆಗಬಾರದು ಎನ್ನುವುದು ನಮ್ಮ ಸ್ಪಷ್ಟ ನಿಲುವು ಆಗಿದ್ದು, ಇದರ ಕುರಿತು ಸಮಾವೇಶದಲ್ಲಿ ಅರಿವು ಮೂಡಿಸುತ್ತೇವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಳ್ಳುವರು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರ ನಡೆಸುವ ಜಾತಿವಾರು ಜನಗಣತಿಯಲ್ಲಿ ಲಿಂಗಾಯತ ವೀರಶೈವ ಎಂದೇ ನಮೂದಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಅಲ್ಲದೇ ಬಸವಣ್ಣನವರ ಹೆಸರು ದುರ್ಬಳಕೆ ಮಾಡಿಕೊಂಡು, ಕೆಲವರಿಂದ ಸಮಾಜ ಒಡೆಯುವ ಕೆಲಸ ನಡೆದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದಂತೆ ಜನರಿಗೆ ತಿಳಿ ಹೇಳುತ್ತೇವೆ’ ಎಂದರು.

ADVERTISEMENT

ಮಹಾರಾಷ್ಟ್ರದ ಬ್ರಹ್ಮಲಿಂಗೇಶ್ವರಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಪ್ರಭು ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠ‌ ಸ್ವಾಮೀಜಿ, ಉಪ್ಪಿನಬೆಟಗೇರಿ ಮಠದ ಸ್ವಾಮೀಜಿ, ಜಯಶಾಂತ ಲಿಂಗೇಶ್ವರ ಸ್ವಾಮೀಜಿ‌ ಇದ್ದರು.

ವೀರಶೈವ ಲಿಂಗಾಯತ ತತ್ವಪ್ರಧಾನ ಧರ್ಮವೆಂದು ಒಪ್ಪಿದವರು ಸಮಾವೇಶಕ್ಕೆ ಬರುತ್ತಾರೆ. ಎಷ್ಟೇ ಪ್ರತಿಷ್ಠಿತ ಮಠವಾದರೂ ಈ ಸುದ್ದಿಗೋಷ್ಠಿಯೇ ಅವರಿಗೆ ಆಹ್ವಾನ.
– ದಿಂಗಾಲೇಶ್ವರ ಸ್ವಾಮೀಜಿ, ಫಕ್ಕೀರೇಶ್ವರಮಠ ಶಿರಹಟ್ಟಿ

‘ಪೀಠತ್ಯಾಗ ಮಾಡಲಿ’

‘ಬಸವ ಸಂಸ್ಕೃತಿ ಯಾತ್ರೆಯ ತಂಡವು ದುರುದ್ದೇಶ ಹೊಂದಿದ್ದು ಸಮಾಜಕ್ಕೆ ತಪ್ಪು ಸಂದೇಶ ಸಾರುತ್ತಿದೆ. ಈ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೇಳುತ್ತಿದ್ದ ಅವರು ಈಗ ಬಸವಧರ್ಮ ಎನ್ನುತ್ತಿದ್ದಾರೆ. ಅವರಲ್ಲಿ ಬದ್ಧತೆ ಕೊರತೆಯಿದೆ. ಅವರ ಸುತ್ತ ಇರುವ ಬುದ್ಧಿಜೀವಿಗಳು ತಮ್ಮದು ಮಠದ ಸಂಸ್ಕೃತಿ ಅಲ್ಲ ಬಸವ ಸಂಸ್ಕೃತಿ ಎನ್ನುತ್ತಾರೆ. ಮಠದ ಸಂಸ್ಕೃತಿಯಲ್ಲ ಎಂದಾದರೆ ಸ್ವಾಮೀಜಿಗಳು ಪೀಠತ್ಯಾಗ ಮಾಡಲಿ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.