ADVERTISEMENT

ಹುಬ್ಬಳ್ಳಿ: ಏಕತಾ ಸಮಾವೇಶ ಸಿದ್ಧತೆ ಪರಿಶೀಲನೆ

ಮುಖಂಡರೊಂದಿಗೆ ಸಚಿವ ಈಶ್ವರ ಖಂಡ್ರೆ, ದಿಂಗಾಲೇಶ್ವರ ಸ್ವಾಮೀಜಿ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:18 IST
Last Updated 16 ಸೆಪ್ಟೆಂಬರ್ 2025, 4:18 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಪೂರ್ವ ಸಿದ್ಧತೆಯನ್ನು ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸೋಮವಾರ ಪರಿಶೀಲಿಸಿದರು
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಪೂರ್ವ ಸಿದ್ಧತೆಯನ್ನು ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸೋಮವಾರ ಪರಿಶೀಲಿಸಿದರು   

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಸೆಪ್ಟೆಂಬರ್‌ 19ರಂದು ಹಮ್ಮಿಕೊಂಡಿರುವ ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ದ ಸಿದ್ಧತೆಯನ್ನು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಸಚಿವ ಈಶ್ವರ ಖಂಡ್ರೆ ಸೋಮವಾರ ಪರಿಶೀಲಿಸಿದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಮಾವೇಶಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವಾಮೀಜಿಗಳು, ವಿವಿಧ ಜವಾಬ್ದಾರಿ ವಹಿಸಿಕೊಂಡಿರುವ ಮುಖಂಡರೊಂದಿಗೆ ಪೂರ್ವಸಿದ್ಧತೆ ಸಭೆ ಮಾಡಲಾಗಿದೆ. ಸಮಾವೇಶದಲ್ಲಿ ಎಲ್ಲ ವೀರಶೈವ ಲಿಂಗಾಯತರು ಪಾಲ್ಗೊಳ್ಳಬೇಕು’ ಎಂದು ಕೋರಿದರು. 

‘ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ವೀರಶೈವ ಲಿಂಗಾಯತರು ಮೊದಲಿನಿಂದಲೂ ನವಭಾರತ, ನವ ಕರ್ನಾಟಕ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲ ಜಾತಿ, ಭಾಷೆಯವರನ್ನು ಒಳಗೊಂಡು ಎಲ್ಲರಿಗೂ ಶಿಕ್ಷಣ, ಸಂಸ್ಕಾರ, ಆಶ್ರಯ ಹಾಗೂ ಅನ್ನ ಕೊಡುವ ಕಾರ್ಯವನ್ನು ಈಗಲೂ ಮಾಡಿಕೊಂಡು ಬರುತ್ತಿದ್ದಾರೆ’ ಎಂದರು.

ಒಗ್ಗಟ್ಟು ಪ್ರದರ್ಶಿಸಿ: ‘ಸಮಾಜದ ಅಭಿವೃದ್ಧಿಗಾಗಿ ಎಲ್ಲ ವೀರಶೈವ ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸಬೇಕು. ಇದಕ್ಕಾಗಿ ವಿಚಾರ ಭೇದ, ಒಳಪಂಗಡ ಭೇದ ಲೆಕ್ಕಿಸದೆ ಎಲ್ಲರೂ ಒಂದಾಗಬೇಕು’ ಎಂದು ಖಂಡ್ರೆ ಹೇಳಿದರು.

‘1931ರಲ್ಲಿ ಕೊನೆಯದಾಗಿ ಜಾತಿ ಸಮೀಕ್ಷೆ ನಡೆದಿದೆ. ಲಿಂಗಾಯತ ಮತ್ತು ವೀರಶೈವರ ಅನುಸರಣೆ ಗಮನದಲ್ಲಿಟ್ಟುಕೊಂಡು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೆಲಸ ಮಾಡಿಕೊಂಡು ಬಂದಿದೆ. ಸಮೀಕ್ಷೆಯಲ್ಲಿ ‘ವೀರಶೈವ ಲಿಂಗಾಯತ’ ಎನ್ನುವ ಕಾಲಂ ಇರಬೇಕು ಎನ್ನುವ ವಿಚಾರವನ್ನು ಪ್ರತಿಪಾದನೆ ಮಾಡುತ್ತಾ ಬರಲಾಗಿದೆ’ ಎಂದರು.

‘ವೀರಶೈವ ಲಿಂಗಾಯತ ಎನ್ನುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಒಮ್ಮತ ಸೂಚಿಸಿವೆ. ಈ ಬಗ್ಗೆ ಯಾವುದೇ ಗೊಂದಲ, ವೈಚಾರಿಕ ಭಿನ್ನಾಭಿಪ್ರಾಯ ಬೇಡ’ ಎಂದು ಹೇಳಿದರು.

ಮುಖಂಡರಾದ ಮೋಹನ ಅಸುಂಡಿ, ಸಂಕಲ್ಪ ಶೆಟ್ಟರ್‌, ಮಹಾಸಭಾದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಕೋರಿಶೆಟ್ಟರ್‌ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಇದ್ದರು.

ಏಕತೆ ಸಮಾಜವನ್ನು ಬಲಾಢ್ಯ ಮಾಡುತ್ತದೆ. ವಿಘಟನೆಯಿಂದ ಸಮಾಜ ದುರ್ಬಲವಾಗುತ್ತದೆ. ‘ವೀರಶೈವ ಲಿಂಗಾಯತ ಒಂದು; ವಿಶ್ವವೇ ನಮ್ಮ ಬಂಧು’ ಎನ್ನುವ ಘೋಷವಾಕ್ಯ ನಮ್ಮದಾಗಿದೆ
ದಿಂಗಾಲೇಶ್ವರ ಸ್ವಾಮೀಜಿ ಶಿರಹಟ್ಟಿ ಫಕೀರೇಶ್ವರ ಮಠ 

‘ಸಮೀಕ್ಷೆಯಲ್ಲಿ ಹೀಗೆ ಬರೆಸಿ’ 

‘ರಾಜ್ಯದಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಅಥವಾ ವೀರಶೈವ ಅಥವಾ ಲಿಂಗಾಯತ ಎಂದು ನಿಖರವಾಗಿ ಬರೆಸಬೇಕು. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಧರ್ಮದ ಕಾಲಂನಲ್ಲಿ ಇತರೆ ಇರುವ ಕಡೆ ’ವೀರಶೈವ ಲಿಂಗಾಯತ’ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ 135 ಒಳಪಂಗಡಗಳ ಪೈಕಿ ಸಂಬಂಧಿಸಿದ್ದನ್ನು ಬರೆಸಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.