ADVERTISEMENT

ಗುರು, ವಿರಕ್ತರು ಒಂದು ವೇದಿಕೆಯಡಿ ಬರಲಿ: ಸಂಸದ ಜಗದೀಶ ಶೆಟ್ಟರ್‌

ಸಮಾವೇಶ, ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 4:25 IST
Last Updated 28 ಜುಲೈ 2025, 4:25 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ‍ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ‍ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಸಮಾಜವನ್ನು ಬಲಪಡಿಸುವುದೇ ಎಲ್ಲ ಒಳಪಂಗಡದವರ ಗುರಿ ಆಗಬೇಕು. ಒಗ್ಗಟ್ಟು ಇಲ್ಲದಿದ್ದರೆ ಸಮಾಜ ಛಿದ್ರವಾಗುತ್ತದೆ. ಸಮಾಜದ ಸಂಘಟನೆಗೆ ನಾಡಿನ ಗುರು, ವಿರಕ್ತರು ಒಂದ ವೇದಿಕೆಯಡಿ ಬರಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಮೂರುಸಾವಿರ ಮಠದ ವೀರಶೈವ ಸಂಘಟನಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೀರಶೈವ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಪ್ರಯತ್ನ ನಡೆದಿದೆ. ಕೇಂದ್ರ ಸರ್ಕಾರ ನಡೆಸಲಿರುವ ಜಾತಿಗಣತಿ ವೇಳೆ ಸಮಾಜದ ಹೆಸರು ಬರೆಸುವಾಗ ಜಾಗ್ರತೆ ವಹಿಸಬೇಕು. ಸಮಾಜದ ಕುರಿತಾಗಿ ಸ್ವಾಮೀಜಿಗಳು ಭಿನ್ನಮತದ ಹೇಳಿಕೆ ನೀಡಬಾರದು’ ಎಂದರು.

ADVERTISEMENT

‘ಈ ಹಿಂದೆ ರಾಜ್ಯ ಸರ್ಕಾರ ನಡೆಸಿದ್ದ ಸಮೀಕ್ಷೆಯಲ್ಲಿ ಬೇರೆ ಬೇರೆ ಹೆಸರು ನಮೂದಿಸಿದ್ದರಿಂದಲೇ ಸಮಾಜದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಕೇಂದ್ರದ ಗಣತಿಯಲ್ಲಿ ಮೀಸಲಾತಿಗೆ ತೊಂದರೆಯಾಗದಂತೆ ಜಾತಿ ಹೆಸರು ಬರೆಸುವ ಕುರಿತು ಮುಖಂಡರು ಮಾರ್ಗದರ್ಶನ ಮಾಡುವರು. ಅದರಂತೆಯೇ ನಡೆದುಕೊಳ್ಳಬೇಕು.‌ ಆಗಷ್ಟೇ ಸಮಾಜದ ಶಕ್ತಿ ಏನೆಂಬುದು ತಿಳಿಯುತ್ತದೆ’ ಎಂದು ಹೇಳಿದರು.

‘ಬಸವಣ್ಣನವರು ಸಾರಿದ ವೈಚಾರಿಕತೆ ತತ್ವ ಅನುಸರಿಸುತ್ತಿರುವುದರಿಂದಲೇ ಸಮಾಜವು ಇತರೆ ಎಲ್ಲ ಸಮಾಜದವರ ವಿಶ್ವಾಸ ಗಳಿಸಿದೆ. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳ ಜತೆಗೆ ತೊಂದರೆಯಲ್ಲಿದ್ದವರಿಗೆ ನೆರವಾಗುವ ಕಾರ್ಯ ನಡೆಯಬೇಕು’ ಎಂದರು.

ಮಲ್ಲಿಕಾರ್ಜುನ ಸಾವುಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರತಿಭಾ ಪುರಸ್ಕಾರವಾಗಿ ₹1 ಸಾವಿರ ನಗದು, ಬೆಳ್ಳಿ ಕರಡಿಗೆ, ಲಿಂಗ ನೀಡಲಾಗುತ್ತಿದೆ’ ಎಂದರು. 

ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಕಲಬುರಗಿ ಮಠದ ಚರಲಿಂಗ ಸ್ವಾಮೀಜಿ, ಸಿದ್ದರಾಮ ದೇವರು ಸಾನ್ನಿಧ್ಯ ವಹಿಸಿದ್ದರು. ಸುರೇಶ ಕುನ್ನೂರು, ಸಿದ್ದನಗೌಡ ಪಾಟೀಲ, ಚನ್ನು ಹೊಸಮನಿ, ಲಿಂಗರಾಜ ಮುಳ್ಳಳ್ಳಿ ಅವರನ್ನು ಸನ್ಮಾನಿಸಲಾಯಿತು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಪ್ರಕಾಶ ಬೆಂಡಿಗೇರಿ, ತಾರಾದೇವಿ ವಾಲಿ, ವಿಜಯಕುಮಾರ್ ಶೆಟ್ಟರ್, ನಾಗರಾಜ ಗೌರಿ, ಸುನಿತಾ ಬಾಗೇವಾಡಿ, ಚನ್ನಬಸಪ್ಪ ಧಾರವಾಡಶೆಟ್ರು ಇದ್ದರು. 

ಪ್ರಯತ್ನದಿಂದ ಸಾಧನೆ ಸಾಧ್ಯ. ಶಿಕ್ಷಣವೇ ಶಕ್ತಿಯಾಗಿದ್ದು ಅದರಿಂದ ಸದೃಢ ದೇಶ ಕಟ್ಟಬಹುದು. ಮಾನವೀಯತೆ ವಿಕಾಸ ಶಿಕ್ಷಣ
-ಮಂಜುನಾಥ ಕುನ್ನೂರು, ಹಾವೇರಿ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.