ADVERTISEMENT

ವಿನಯ ಕುಲಕರ್ಣಿ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 15:25 IST
Last Updated 18 ಏಪ್ರಿಲ್ 2019, 15:25 IST
ಧಾರವಾಡದ ನವಲೂರಿನಲ್ಲಿ ಗುರುವಾರ ನಡೆದ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ವಿನಯ ಕುಲಕರ್ಣಿ ಮಾತನಾಡಿದರು
ಧಾರವಾಡದ ನವಲೂರಿನಲ್ಲಿ ಗುರುವಾರ ನಡೆದ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ವಿನಯ ಕುಲಕರ್ಣಿ ಮಾತನಾಡಿದರು   

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಗುರುವಾರ ನಗರದಲ್ಲಿ ಬಿರುಸಿನಪ್ರಚಾರ ಕೈಗೊಂಡರು.

ನವಲೂರು, ಕೆಲಗೇರಿ ಮತ್ತು ಕಮಲಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು ಬಹಿರಂಗ ಸಭೆ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಅಂಬಾನಿಯ ಜಿಯೋ ಟೆಲಿಕಾಮ್‌ಗೆ ₹10ಸಾವಿರ ಕೋಟಿ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಎಸ್‌ಎನ್‌ಎಲ್‌ನ ಹತ್ತು ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೆ ಈ ಕುರಿತು ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಅವರು ನಮ್ಮವರೇ ಅಲ್ಲವೇ. ಬಿಎಸ್ಎನ್‌ಎಲ್‌ ಈ ದೇಶದ ಹೆಮ್ಮೆಯ ಸಂಸ್ಥೆ. ಆದರೆ ಅದನ್ನು ಮುಚ್ಚಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ’ ಎಂದು ವಿನಯ ಕುಲಕರ್ಣಿ ಹೇಳಿದರು.

ADVERTISEMENT

‘ಇಡೀ ಜಗತ್ತಿಗೆ ದೊಡ್ಡ ಪ್ರಜಾಪ್ರಭುತ್ವಕ್ಕೆ ಕಾರಣೀಭೂತರಾದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಟ್ಟು ಅಟ್ಟಹಾಸ ಮೆರೆದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಮತ್ತೆ ಆಯ್ಕೆಯಾದರೆ ಸಂವಿಧಾನ ಬದಲಿಸುವ ಮಾತುಗಳನ್ನು ಇವರ ಸಂಸದರು ಆಡುತ್ತಿದ್ದಾರೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜನರ ಹಿತ ಕಾಯುವ ಸಂವಿಧಾನವನ್ನು ಬದಲಿಸಿ ಮತ್ತೊ ಶೋಷಿತ ಸಮಾಜ ನಿರ್ಮಾಣ ಇವರ ಹುನ್ನಾರ’ ಎಂದು ಆರೋಪ ಮಾಡಿದರು.

‘ವೀರಶೈವ ಲಿಂಗಾಯತ ಸಮುದಾಯದ ಒಲವು ಕಾಂಗ್ರೆಸ್‌ಗೆ ಇದೆ ಎಂದು ತಿಳಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ತಮ್ಮ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರ ಇಟ್ಟು ಪೂಜೆ ಮಾಡಿದ್ದಾರೆ. ಆದರೆ ಆ ಚಿತ್ರ ಆರ್‌ಎಸ್‌ಎಸ್ ಕಚೇರಿಯಲ್ಲಿ ಇಡಲಿಲ್ಲ. ಚುನಾವಣೆ ಬರುತ್ತಿದ್ದಂತೆ ಲಿಂಗಾಯತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇಂಥವುಗಳಿಗೆ ಮತದಾರರು ಮರುಳಾಗಬಾರದು’ ಎಂದು ವಿನಯ ಮನವಿ ಮಾಡಿಕೊಂಡರು.

‘ಮಹದಾಯಿ ನದಿ ನೀರು ರಾಜ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿರುವುದಕ್ಕೂ ಪ್ರಹ್ಲಾದ ಜೋಶಿಯೇ ಕಾರಣ. ಅತ್ತ ಗೋವಾದವರೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದ ರೈತರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪ ಮಾಡಿದರು.

ಕಾಂಗ್ರೆಸ್‌ನ ಹಿಂದುಳಿದ ವರ್ಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ಲಕ್ಷ್ಮೀನಾರಾಯಣ, ಅಲ್ಪಸಂಖ್ಯಾತರ ಘಟಕದ ವೈ. ಸೈಯದ್‌, ಇಸ್ಮಾಯಿಲ್ ತಮಟಗಾರ, ಆನಂದ ಸಿಂಗನಾಥ, ಬಸವರಾಜ ಮಲಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.