ADVERTISEMENT

ರೋಡ್‌ ಶೋ ಮೂಲಕ ವಿನಯ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:39 IST
Last Updated 11 ಏಪ್ರಿಲ್ 2019, 17:39 IST
ಹುಬ್ಬಳ್ಳಿಯಲ್ಲಿ ಗುರುವಾರ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ರೋಡ್‌ ಶೋ ಮೂಲಕ ಮತಯಾಚಿಸಿದರು
ಹುಬ್ಬಳ್ಳಿಯಲ್ಲಿ ಗುರುವಾರ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ರೋಡ್‌ ಶೋ ಮೂಲಕ ಮತಯಾಚಿಸಿದರು   

ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದರು.

ಸಂತೋಷ ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿನ ಉದ್ಯಾನದಿಂದ ಶೋ ಆರಂಭಿಸಿದ ವಿನಯ ‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕಾದರೆ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸಬೇಕು. 15 ವರ್ಷ ಸಂಸದರಾಗಿದ್ದರೂ ಏನೂ ಕೆಲಸ ಮಾಡದ ಪ್ರಹ್ಲಾದ ಜೋಶಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್‌ಗೆ ಮತ, ದೇಶಕ್ಕೆ ಹಿತ’ ಎಂದು ಮನವಿ ಮಾಡಿಕೊಂಡರು.

ಸಂತೋಷ ನಗರದಿಂದ ಗೋಪನಕೊಪ್ಪ, ದೇವಾಂಗಪೇಟೆ, ಭವಾನಿ ನಗರ, ರಮೇಶ ಭವನ ಮತ್ತು ಅಶೋಕ ನಗರದವರೆಗೆ ರೋಡ್‌ ಶೋನಲ್ಲಿ ತೆರಳಿ ಪ್ರಚಾರ ಮಾಡಿದರು. ದಾರಿಯುದ್ದಕ್ಕೂ ಕಾರ್ಯಕರ್ತರು ವಿನಯ ಕುಲಕರ್ಣಿಗೆ ಮತ ನೀಡುವಂತೆ ಘೋಷಣೆ ಕೂಗಿ, ಜೈಕಾರ ಹಾಕಿದರು.

ADVERTISEMENT

ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕಾಂಗ್ರೆಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕಾಂಗ್ರೆಸ್‌ ಮುಖಂಡರಾದ ಪ್ರಫುಲ್‌ಚಂದ್ರ ರಾಯನಗೌಡ್ರ, ಶಿವಕುಮಾರ ರಾಯನಗೌಡ್ರ, ಶಹಜಯಾನ್‌ ಮುಜಾಯಿದ್‌, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.