ADVERTISEMENT

ವಿಚಾರಕ್ಕೆ ಮತ ಹಾಕಿ, ಕೆಲಸ ಮಾಡುವವರನ್ನು ಗೆಲ್ಲಿಸಿ

ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ, ನಟ ಉಪೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 11:08 IST
Last Updated 11 ಏಪ್ರಿಲ್ 2019, 11:08 IST
ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಮಾತನಾಡಿದರು. ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ ಇದ್ದರು
ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಮಾತನಾಡಿದರು. ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ ಇದ್ದರು   

ಹುಬ್ಬಳ್ಳಿ: ಚುನಾವಣೆಯಲ್ಲಿ ‌ವ್ಯಕ್ತಿಯನ್ನು ಗೆಲ್ಲಿಸುವ ಬದಲು, ಅತನ ವಿಚಾರಗಳನ್ನು ಬೆಂಬಲಿಸಿ. ಕೆಲಸ ಮಾಡಿ ಕೂಲಿ ಪಡೆಯುವ ನಾಯಕನನ್ನು ಆರಿಸಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆರಿಸಿ ಕಳುಹಿಸಿದ ಜನಪ್ರತಿನಿಧಿ ಸರಿಯಾಗಿ ಕೆಲಸ ಮಾಡದೇ ಇದ್ದರೆ, ಅವರನ್ನು ವಾಪಸ್‌ ಕರೆಯಿಸಿಕೊಳ್ಳುವ ಅಧಿಕಾರ ಕೂಡ ಜನರಿಗೆ ಇರಬೇಕು. ಜನಪ್ರತಿನಿಧಿ ಅಧಿಕಾರದಿಂದ ಯಜಮಾನನಂತೆ ಬೀಗದೆ ಸೇವಕನಂತೆ ಕೆಲಸ ಮಾಡಬೇಕು. ಆದ್ದರಿಂದ ಬಳ್ಳಾರಿ ಹೊರತುಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ’ ಎಂದರು. ಧಾರವಾಡ ಕ್ಷೇತ್ರದಿಂದ ಸಂತೋಷ ಸ್ಪರ್ಧಿಸಿದ್ದಾರೆ.

‘ಆರಿಸಿ ಕಳುಹಿಸಿದ ಜನರೇ ಐದೂ ವರ್ಷ ಅಧಿಕಾರ ಅನುಭವಿಸಬೇಕು. ಆದ್ದರಿಂದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬದಲಾವಣೆಗೆ ಸಿದ್ಧರಾಗಿ ಎಂದು ಹೊಸ ವಿಚಾರ ಬಿತ್ತುತ್ತಿದ್ದೇವೆ. ಜನರು ಕೊಟ್ಟ ತೆರಿಗೆ ಹಣದಿಂದಲೇ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಆದ್ದರಿಂದ ಜನರ ಕೈಗೆ ಅಧಿಕಾರ ಸಿಗಬೇಕು ಎನ್ನುವ ಉದ್ದೇಶ ನಮ್ಮದು’ ಎಂದರು.

ADVERTISEMENT

ಚುನಾವಣೆ ಇದ್ದಾಗ ಮಾತ್ರ ಪ್ರಚಾರಕ್ಕೆ ಬರುತ್ತೀರಿ, ಉಳಿದ ಸಮಯದಲ್ಲಿ ಜನ ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ‘ನಮ್ಮ ಪಕ್ಷದಿಂದ ಸ್ಪರ್ಧಿಸುವರು ಬೇರೆ ಬೇರೆ ಕಡೆ ಕೆಲಸ ಮಾಡುತ್ತಾರೆ. ಅಧಿಕಾರ ಇಲ್ಲದಿದ್ದರೂ ಐದು ವರ್ಷ ಜನಸೇವೆ ಮಾಡಿ ಎಂದರೆ ಕಷ್ಟ. ಆದ್ದರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪುತ್ತೇವೆ. ಅವರಿಗೆ ಕರಪತ್ರ ನೀಡಿ ನಿಮ್ಮ ಸಮಸ್ಯೆಗಳನ್ನು ಬರೆದುಕೊಡಿ ಎಂದು ಕೇಳುತ್ತೇವೆ. ಈ ಪ್ರಯತ್ನ ನಿರಂತರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.