ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ನಗರದಲ್ಲಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸ್ಟೇಷನ್ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಸ್ಲಿಮರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ, ಫಲಕಗಳನ್ನು ಪ್ರದರ್ಶಿಸಿದರು.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಮುತವಲ್ಲಿಗಳು, ಮುಸ್ಲಿಂ ಸಂಘಟನೆಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ, ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದರು.
ಸಮುದಾಯದ ಮುಖಂಡ ಮಹ್ಮದ್‌ಅಲಿ ಖಾಜಿ ಮಾತನಾಡಿ, ‘ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಎಲ್ಲ ಸಮುದಾಯದವರಿಗೂ ಬದುಕುವ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ. ಅಲ್ಪಸಂಖ್ಯಾತರು ಸೇರಿದಂತೆ ಕೆಳಹಂತದಲ್ಲಿರುವ ಕೆಲವು ಸಮುದಾಯಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಅದನ್ನು ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಸಂವಿಧಾನ ಬಾಹಿರ ಕೃತ್ಯ. ಈ ಕೂಡಲೇ ತಿದ್ದುಪಡಿ ಮಾಡಿರುವ ವಕ್ಫ್ ಕಾಯ್ದೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ದೇಶದ ಸ್ವಾತಂತ್ರ್ಯಕ್ಕೆ ಮುಸ್ಲಿಂ ಸಮುದಾಯದವರು ಸಹ ಹೋರಾಡಿ, ರಕ್ತ ಹರಿಸಿದ್ದಾರೆ. ಭಾರತ ನಮ್ಮ ದೇಶವಾಗಿದ್ದು, ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಮುಸ್ಲಿಮರ ಸಹನೆ ಪರೀಕ್ಷಿಸುವ ಕೆಲಸ ಯಾರೂ ಮಾಡಬಾರದು’ ಎಂದು ಧರ್ಮಗುರು ಜಹಿರುದ್ದಿನ್ ಖಾಜಿ ಎಚ್ಚರಿಸಿದರು.
ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ‘ಯಾರೊಂದಿಗೂ ಚರ್ಚಿಸಿದೆ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಮುಸ್ಲಿಂ ಸಮುದಾಯಕ್ಕೆ ವಿರೋಧವಾಗಿರುವ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ, ರಾಷ್ಟ್ರಪತಿ ಮಧ್ಯೆ ಪ್ರವೇಶಿಸಿ, ಕಾಯ್ದೆ ಹಿಂಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಅಲ್ಹಾಜ್ ಅಬ್ದುಲ್ ಖಾದರ ಅತ್ತಾರ, ಬಶೀರ್‌ಅಹ್ಮದ್ ಹಳ್ಳೂರ, ಮೊಹ್ಮದ್‌ರಫಿ ಬಂಕಾಪುರ, ಅಲ್ತಾಫ್ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ್ ಸನದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.