ಹುಬ್ಬಳ್ಳಿ: ನಗರಕ್ಕೆ ಹೊಂದಿಕೊಂಡಿದ್ದರೂ ಗ್ರಾಮೀಣ ಪರಿಸರವನ್ನು ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 82ರಲ್ಲಿ ಕಾಣಬಹುದು. ಹೊರವಲಯದಲ್ಲಿರುವ ಈ ವಾರ್ಡ್‌ನ ಕೃಷಿ ಭೂಮಿಯಲ್ಲಿ ಹೊಸ ಬಡಾವಣೆಗಳೂ ತಲೆ ಎತ್ತುತ್ತಿವೆ.
ಬಿಡ್ನಾಳ, ಗಬ್ಬೂರ ಬಡಾವಣೆಗಳಲ್ಲಿ ಕೃಷಿ ಕುಟುಂಬಗಳು ಹೆಚ್ಚು ಇವೆ. ಉಳಿದೆಡೆ ಆಟೊ ಓಡಿಸುವುದು, ಕೂಲಿ, ಗೌಂಡಿ, ಬಾರ್ ಬೆಂಡಿಂಗ್ ಕೆಲಸ ಮಾಡಿ ಜನರು ಜೀವನ ಸಾಗಿಸುತ್ತಾರೆ.
ಪುಣೆ –ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ–ಧಾರವಾಡ ಬೈಪಾಸ್, ಗದಗ –ಕಾರವಾರ ರಸ್ತೆ ಮತ್ತು ವರ್ತುಲ ರಸ್ತೆಗಳು ವಾರ್ಡ್‌ಗೆ ಹೊಂದಿಕೊಂಡಿವೆ. ನಿರ್ಮಾಣ ಹಂತದಲ್ಲಿರುವ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹ ವಾರ್ಡ್ ಸಮೀಪ ಇದೆ.
ಹೊಸ ಗಬ್ಬೂರಿನಲ್ಲಿ 24X7 ಕುಡಿಯುವ ನೀರಿನ ಸೌಲಭ್ಯ ಇದೆ. ಬಹುತೇಕ ಕಡೆ ಸಿ.ಸಿ ರಸ್ತೆಗಳು ನಿರ್ಮಾಣವಾಗಿವೆ. ಸಿದ್ಧಾರೂಢ ಕಾಲೊನಿ, ನೀಲಗುಂದ ಲೇಔಟ್‌ನಲ್ಲಿ ₹1 ಕೋಟಿ ಅನುದಾನದಲ್ಲಿ ಒಂಚರಂಡಿ ಕಾಮಗಾರಿ ಆರಂಭವಾಗಿದ್ದು, ವಾರ್ಡ್ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ.
ಬಿಡ್ನಾಳದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದ ಗಣೇಶ, ಮೊಹರಂ ಹಬ್ಬಗಳನ್ನು ಆಚರಿಸುವುದು ವಿಶೇಷ.
ಕಲ್ಲನಗೌಡ್ರು ಪಾಟೀಲ ಅವರು 1983–84ರಲ್ಲಿ ಶಾಲೆಗಾಗಿ ತಮ್ಮ ಮಗನ ಹೆಸರಿನಲ್ಲಿ ಬಿಡ್ನಾಳದಲ್ಲಿ ಎರಡು ಎಕರೆ ಜಾಗ ನೀಡಿದ್ದರು. ಅದರಲ್ಲಿ ಆರ್.ಕೆ.ಪಾಟೀಲ ಸರ್ಕಾರಿ ಪ್ರೌಢಶಾಲೆ ಇದ್ದು, ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಈಗ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದೆ.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ಎಲ್‌ಕೆಜಿ, ಯುಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದನೇ ತರಗತಿಗೆ ಲಾಟರಿ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವ ರೀತಿ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತಿದೆ.
ಬಿಡ್ನಾಳದ ಮುಖ್ಯ ರಸ್ತೆ, ಸೋನಿಯಾಗಾಂಧಿ ನಗರ ಸೇರಿ ವಿವಿಧೆಡೆ ರಸ್ತೆಗಳು ಅಭಿವೃದ್ಧಿ ಆಗಬೇಕು ಎಂಬುದು ವಾರ್ಡ್ ನಿವಾಸಿಗಳ ಆಗ್ರಹವಾಗಿದೆ.
‘ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಒಂದು ಮನೆಗೆ ಕೇವಲ 10 ಕೊಡ ನೀರು ಸಿಗುತ್ತದೆ. ಜನರು ಎಲ್ಲ ಕೆಲಸ ಬಿಟ್ಟು ನೀರಿಗಾಗಿ ಕಾಯಬೇಕಾದ ಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಬೀಡಿ ಕಾರ್ಮಿಕರ ನಗರದ ಫಯಾಜ್ ಎ.ಬಿಳೆಪಸಾರ ಆಗ್ರಹಿಸಿದರು.
‘ಬೀಡಿ ಕಾರ್ಮಿಕರ ನಗರದಲ್ಲಿ 205 ಮನೆಗಳಿವೆ. ಮಹಿಳೆಯರು ಬೀಡಿ ಕಟ್ಟುವ ಮೂಲಕ ಜೀವನ ಸಾಗಿಸುತ್ತಾರೆ. ಇಲ್ಲಿ ಅಂಗನವಾಡಿ ಇಲ್ಲ. ಬಿಡ್ನಾಳಕ್ಕೆ ಮಕ್ಕಳನ್ನು ಕಳಿಸಬೇಕಿದೆ. ಇಲ್ಲಿಯೇ ಅಂಗನವಾಡಿ ಆರಂಭಿಸಿದರೆ ಅನುಕೂಲವಾಗುತ್ತದೆ’ ಎಂದು ಫಾತಿಮಾ ನಾಲಬಂದ್ ಹೇಳಿದರು.
ಸೋನಿಯಾ ಗಾಂಧಿ ನಗರದಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಇಲ್ಲಿ 1,600 ಮನೆಗಳಿದ್ದು, ಸುರಕ್ಷತೆ ದೃಷ್ಟಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ₹50 ಲಕ್ಷ ಅನುದಾನದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಲಾಗುತ್ತಿದೆ ಎನ್ನುತ್ತಾರೆ ವಾರ್ಡ್ ಸದಸ್ಯೆ ಅಕ್ಷತಾ ಅಸುಂಡಿ.
₹50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡಕ್ಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಮೌಲಾನಾ ಆಜಾದ್ ವಸತಿ ಶಾಲೆ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಬಿಡ್ನಾಳದಿಂದ ಗಬ್ಬೂರು ವರೆಗೆ ₹9 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
- ಬೇಡಿಕೆಗಳು
* ಕಸ ವಿಲೇವಾರಿ ಸಮರ್ಪಕವಾಗಿ ಆಗಲಿ
* ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿ
* ಎಲ್ಲ ಕಡೆ ಚರಂಡಿ ನಿರ್ಮಿಸಿ
* ಪ್ರಮುಖ ಬಡಾವಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.