ADVERTISEMENT

ಜೀವಕ್ಕೆ ಎರವಾಯಿತೇ ಅತಿ ವೇಗ?

ಅಪಘಾತ: ಕಿರಿದಾದ ರಸ್ತೆಯ ಅಪಾಯ ಲೆಕ್ಕಿಸದ ಬಸ್ ಚಾಲಕ

​ಪ್ರಜಾವಾಣಿ ವಾರ್ತೆ
Published 25 ಮೇ 2022, 8:31 IST
Last Updated 25 ಮೇ 2022, 8:31 IST
ಅತಾವುಲ್ಲಾ ಖಾನ್
ಅತಾವುಲ್ಲಾ ಖಾನ್   

ಹುಬ್ಬಳ್ಳಿ: ‘ಡೆಡ್ಲಿ ರಸ್ತೆ’ ಎಂದೇ ಕುಖ್ಯಾತಿಯಾಗಿರುವ ಹುಬ್ಬಳ್ಳಿಯ ಗಬ್ಬೂರಿನಿಂದ ಧಾರವಾಡದ ನರೇಂದ್ರದವರೆಗಿನ ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿ ಸಂಭವಿಸಿದ ಅಪಘಾತಕ್ಕೆ, ಅತಿ ವೇಗವೇ ಮುಖ್ಯ ಕಾರಣ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

‘ಚಳಿಯಲ್ಲಿ ಹೋಗುತ್ತಿದ್ದ ನಮ್ಮ ಟ್ರಾಕ್ಟರ್ ಪಕ್ಕದಲ್ಲೇ ಸರ್ರೆಂದು ವೇಗವಾಗಿ ಹೋದ ಸ್ಲೀಪರ್ ಬಸ್‌, ಎದುರಿಗೆ ಬಂದ ಲಾರಿ ಎರಡೂ ಮುಖಾಮುಖಿ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿ ನಮ್ಮ ಟ್ರೇಲರ್‌ ಮೇಲೆ ಬಿದ್ದರೆ, ಬಸ್‌ ರಸ್ತೆಗೆ ಅಡ್ಡವಾಗಿ ತಿರುಗಿ ನಿಂತಿತು’ ಎಂದು ಟ್ರಾಕ್ಟರ್‌ನಲ್ಲಿದ್ದ ರೈತರ ಮಾವನೂರಿನಹನುಮಂತಪ್ಪ ಹಣಮಶಾನಿ ಘಟನೆಯ ಕ್ಷಣವನ್ನು ಬಿಚ್ಚಿಟ್ಟರು.

ಹನುಮಂತಪ್ಪ ಸೇರಿದಂತೆ ನಾಲ್ವರು ತಮ್ಮ ಊರಿನ ರೈತರೊಬ್ಬರ ಮಾವಿನಕಾಯಿಗಳನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಕೆಲಗೇರಿಯಲ್ಲಿ ಇಳಿಸಿ ವಾಪಸ್ಸಾಗುತ್ತಿದ್ದರು.

ADVERTISEMENT

‘ಅಕ್ಕಿ ಚೀಲಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಯೂ ವೇಗವಾಗಿತ್ತು. ಹಾಗಾಗಿಯೇ, ಬಸ್ ಮತ್ತು ಲಾರಿಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಯಿತು. ಏರಿಳಿತದಂತಿರುವ ಬೈಪಾಸ್‌ನಲ್ಲಿ ಕೆಲವೆಡೆ ಎದುರಿಗೆ ಬರುವ ವಾಹನಗಳು ಗೊತ್ತಾಗುವುದಿಲ್ಲ. ಹಾಗಾಗಿ, ಬಸ್ ಚಾಲಕ ನಮ್ಮ ಟ್ರಾಕ್ಟರ್‌ ಹಿಂದಿಕ್ಕಲು ಮುಂದಾದರು. ಆದರೆ, ಎದುರಿಗೆ ಒಮ್ಮೆಲೇ ಬಂದ ಲಾರಿಗೆ ಡಿಕ್ಕಿ ಹೊಡೆದರು. ಚಾಲಕ ಒಂದು ಕ್ಷಣ ಕಾದಿದ್ದರೂ, ಎಂಟು ಜೀವಗಳು ಉಳಿಯುತ್ತಿದ್ದವು. ಹಲವರು ಮೈಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವುದು ತಪ್ಪುತ್ತಿತ್ತು’ ಎಂದು ಹೇಳಿದರು.

ಕೈ ಕಾಲುಗಳೇ ಆಡಲಿಲ್ಲ

‘ಕಣ್ಣೆದುರಿಗೆ ನಡೆದ ಅಪಘಾತ ಮತ್ತು ಹೆಣಗಳನ್ನು ನೋಡಿ ಮೈ ನಡುಗಿ ಹೋಯಿತು. ಗಾಯಗೊಂಡವರ ಆರ್ತನಾದಕ್ಕೆ ಕೈ ಕಾಲುಗಳೇ ಆಡಲಿಲ್ಲ. ಏನು ಮಾಡಬೇಕೆಂದು ತೋಚದೆ ಕೆಲ ಕ್ಷಣ ಸ್ತಬ್ಧರಾದೆವು.ಘಟನೆ ನಡೆದಾಗ ಟ್ರಾಕ್ಟರ್‌ನ ಎಂಜಿನ್‌ನಲ್ಲಿ ಇಬ್ಬರು ಕುಳಿತಿದ್ದೆವು. ಉಳಿದಿಬ್ಬರು ಟ್ರೇಲರ್‌ನಲ್ಲಿ ಮಲಗಿದ್ದರು. ನಮ್ಮ ಬಳಿಯೇ ಅಪಘಾತ ಸಂಭವಿಸಿದರೂ ದೇವರ ದಯೆಯಿಂದ ನಾಲ್ವರೂ ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದೆವು. ಪಲ್ಟಿಯಾದ ಲಾರಿ ಟ್ರಾಕ್ಟರ್‌ನ ಟ್ರೇಲರ್‌ನ ಒಂದು ಭಾಗಕ್ಕೆ ತಾಗಿದ್ದರಿಂದ ಸ್ವಲ್ಪ ಹಾನಿಯಾಗಿದೆ’ ಎಂದರು.

ಗಾಯಾಳುಗಳು

ಘಟನೆಯಲ್ಲಿ ಬೆಳಗಾವಿಯ ಸಂಕೇಶ್ವರದ ಸಹನಾ ಘಾಟಸಿ, ನಿಪ್ಪಾಣಿಯ ಕೃಷ್ಣಾ ಮಹಾಜನ, ಶಿರಾದ ಅನಿತಾ,ನೇಪಾಳದ ಕೆ. ಸಾಯಿ, ರವಿ ಸಿಂಗ್, ಜ್ಯೋತಿ ರವಿಸಿಂಗ್, ಮಹೇಂದ್ರ ರವಿ ಸಿಂಗ್, ಮಹಾರಾಷ್ಟ್ರದ ಓಂಕಾರ ಮಾಲೈ, ಸಿದ್ರುನ ಮಾವುರ, ಶುಭಂ ಚೌಗಲೆ, ಅಕ್ಷಯ ಮಾಲಪಾನಿ, ಪ್ರತೀಕ್ಷಾ ನವಲೆ,ಓಂಕಾರ ಸುತ್ತಾರ, ಸಂಜಯ ಪಿಸೆ, ಚಂದ್ರಕಾಂತ ಆರ್ಡೆ, ಸುಪ್ರಿಯಾ ಪಾಟೀಲ್, ಸರೋಜಾ ವಾಘ, ಲಾರಿ ಕ್ಲೀನರ್ದಿಗ್ವಿಜಯ ಪಾಟೀಲ ಹಾಗೂ ತಮಿಳುನಾಡಿನ ರಾಜಾ ಫ್ರಾನ್ಸಿಸ್.

ಘಟನೆಯಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ, ನೇಪಾಳದ ಒಂದೇ ಕುಟುಂಬದ ನಾಲ್ವರು ಕೆ. ಸಾಯಿ, ರವಿ ಸಿಂಗ್, ಜ್ಯೋತಿ ರವಿಸಿಂಗ್, ಮಹೇಂದ್ರ ರವಿ ಸಿಂಗ್ ಹಾಗೂ ಅವರ ಪುತ್ರ ಗಾಯಗೊಂಡವರು.ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಸಿಂಗ್ ಕುಟುಂಬದವರು, ಬೆಂಗಳೂರಿನಲ್ಲಿ ಕೆಲಸ ಅರಸಿ ಕುಟುಂಬಸ ಮೇತ ಬಸ್‌ನಲ್ಲಿ ಹೊರಟ್ಟಿದ್ದರು. ಘಟನೆಯಲ್ಲಿ ಮಗುವಿನ ಕಾಲು ಮತ್ತು ಕೈಗೂ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಕುಟುಂಬದವರು ತಿಳಿಸಿದರು.

‘ಗಾಯಗೊಂಡು ಕಿಮ್ಸ್‌ಗೆ ದಾಖಲಾಗಿದ್ದ 29 ಮಂದಿ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಳಿದ 27 ಮಂದಿಗೆಚಿಕಿತ್ಸೆ ಪಡೆದು ಸಂಜೆ ಮನೆಗೆ ಹೋದರು’ ಎಂದುಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

ಮುಂಭಾಗದಲ್ಲಿದ್ದವರ ಸಾವು

ಬಸ್‌ನ ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಾಜ ಆಚಾರ್ ಮತ್ತು ಮತ್ತೊಬ್ಬ ಚಾಲಕ ಮಂಡ್ಯ ಜಿಲ್ಲೆಯ ನಾಗಮಂಗಲದ ಅತಾವುಲ್ಲಾ ಖಾನ್ ಸೇರಿದಂತೆ, ಬಸ್‌ ಮುಂಭಾಗ ಕುಳಿತಿದ್ದ ಮೊದಲ ಮೂರು ಸಾಲುಗಳ ಪ್ರಯಾಣಿಕರೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

‘ಡಿಕ್ಕಿಯ ರಸಭಕ್ಕೆ ಮುಂದಿದ್ದ ಮೂರು ಸೀಟುಗಳಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟರು. ಘಟನೆ ನಡೆದು 10–15 ನಿಮಿಷದವರೆಗೆ ಎಲ್ಲರೂ ಬಸ್‌ನೊಳಗೆ ಇದ್ದೆವು. ಗಾಯಾಳುಗಳ ಅಳು, ನೆರವಿಗೆ ಕೂಗಿಕೊಳ್ಳುವರು ಹಾಗೂ ಮಕ್ಕಳ ಆರ್ತನಾದ ಆ ಸನ್ನಿವೇಶವನ್ನು ಒಂದು ಕ್ಷಣ ನರಕವಾಗಿಸಿತು’ ಎಂದು ಗಾಯಾಳು ನಿಪ್ಪಾಣಿಯ ಚಂದ್ರಕಾಂತ ಹೇಳಿದರು.

ಬೆಂಗಳೂರಿನಲ್ಲಿ ವಾಯುಪಡೆಯಲ್ಲಿ ಉದ್ಯೋಗಿಯಾಗಿರುವ ಅವರು, ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದರು. ‘ಕೆಲ ಹೊತ್ತಿನ ನಂತರ ಸ್ಥಳಕ್ಕೆ ಪೊಲೀಸರು ಹಾಗೂ ಆಂಬುಲೆನ್ಸ್ ಬಂತು. ನಂತರ ಬಸ್‌ನ ತುರ್ತು ದ್ವಾರ ತೆಗೆದು ಒಬ್ಬೊಬ್ಬರನ್ನೇ ಕೆಳಕ್ಕಿಳಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದರು’ ಎಂದು ತಿಳಿಸಿದರು.

ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ, ರಾಜ್ಯದಿಂದ ₹5 ಲಕ್ಷ ಪರಿಹಾರ

ಘಟನೆಗೆ ‍ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದಿರುವ ಅಪಘಾತವು ಮನಸ್ಸಿಗೆ ನೋವವುಂಟು ಮಾಡಿದೆ. ಅವರ ಕುಟುಂಬದ ನೋವಿನಲ್ಲಿ ನಾನೂ ಭಾಗಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದಿರುವ ಅವರು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್‌) ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಪ್ರಧಾನಿ ಟ್ವೀಟ್ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಟ್ವೀಟ್‌ ಮಾಡಿದ್ದು, ಮೃತರ ಕುಟುಂಬಗಳಿಗೆಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ರಸ್ತೆ ವಿಸ್ತರಣೆ ಪ್ರಕ್ರಿಯೆ ಚುರುಕು: ಸಚಿವ

‘ಹಲವು ಜೀವಗಳನ್ನು ಬಲಿ ಪಡೆದಿರುವ ಅತ್ಯಂತ ಕಿರಿದಾದ ಗಬ್ಬೂರಿನಿಂದ ನರೇಂದ್ರದವರೆಗಿನ ಅಂದಾಜು 32 ಕಿಲೋಮೀಟರ್ ಉದ್ದದ ಬೈಪಾಸ್ ರಸ್ತೆಯನ್ನು ವಿಸ್ತರಣೆಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ’ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಾಮಗಾರಿಯ ಟೆಂಡರ್ ಜೂನ್ 3ಕ್ಕೆ ತೆರೆಯಲಾಗುವುದು. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ. ಅದಕ್ಕೂ‌ ಮುಂಚೆಯೇ ಪೂರ್ಣಗೊಳಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.