ADVERTISEMENT

ಹುಬ್ಬಳ್ಳಿ– ಧಾರವಾಡ | ನೀರು ಪೂರೈಕೆ: ಸಮಸ್ಯೆ ನಿವಾರಣೆಗೆ ವಿಶೇಷ ತಂಡ

ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 15:34 IST
Last Updated 28 ಏಪ್ರಿಲ್ 2022, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಜಲಮಂಡಳಿ, ಎಲ್‌ ಆ್ಯಂಡ್‌ ಟಿ ಹಾಗೂ ಪಾಲಿಕೆಯಿಂದ ತಲಾ ಒಬ್ಬರನ್ನು ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದೆ. ತಂಡವು ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನಿಗಾ ವಹಿಸಲಿದೆ’ ಎಂದು ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಮಂಡಳಿಯ ಹೊರಗುತ್ತಿಗೆ ಸಿಬ್ಬಂದಿಯ ಪ್ರತಿಭಟನೆಯಿಂದಾಗಿ ನಗರದಲ್ಲಿ ನೀರು ಪೂರೈಕೆ ಮೇಲೆ ಪರಿಣಾಮ ಆಗುತ್ತಿದೆ. ಸದ್ಯ ಪರಿಸ್ಥಿತಿ ನಿಭಾಯಿಸಲಾಗುತ್ತಿದ್ದು, ನಗರದ ವಿವಿಧೆಡೆ ಅಲ್ಪ ಪ್ರಮಾಣದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

‘ನೀರು ಸರಬರಾಜಿಗೆ ಯಾರಿಂದಲೂ ತಡೆಯಾಗದಂತೆ ಭದ್ರತೆಗಾಗಿ ಬೆಳಗಾವಿ, ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. 24x7 ಕುಡಿಯುವ ನೀರು ಪೂರೈಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟು, ಶುಕ್ರವಾರ ಬೆಳಿಗ್ಗೆ 10 ಗಂಟೆಯ ಒಳಗಾಗಿ ವರದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಪರ್ಯಾಯ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ಅವಕಾಶ ಕಲ್ಪಿಸಲಾಗುವುದು’ ಎಂದರು.

ADVERTISEMENT

‘ಹೊರಗುತ್ತಿಗೆ ನೌಕರರಿಗೆ ಈಗಿರುವ ಸೌಲಭ್ಯ ಮುಂದುವರೆಯಲಿದೆ. ‌‌‌‌‌‌‌‌‌‌‌‌‌‌‌‌‌‌‌‌‌‌‌‌ಎಲ್‌ ಆ್ಯಂಡ್‌ ಟಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಮುಂದುವರಿಯುವ ಇಚ್ಛೆ ಇಲ್ಲದಿದ್ದರೆ ಮತ್ತೆ ಪಾಲಿಕೆಯಲ್ಲಿ ಮುಂದುವರಿಯಲು ಅವಕಾಶ ಇದೆ. ಆದರೆ, ಹೊರಗುತ್ತಿಗೆ ಆಧಾರದ ಮೇಲೆ 580 ಜನ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಯಾರೊಬ್ಬರೂ ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ’ ಎಂದರು.

ವಾರ ಸಹಕರಿಸಿ: ‘10 ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆ ಇರುವ ಅವಳಿ ನಗರದಲ್ಲಿ 24x7 ನೀರು ಪೂರೈಕೆ ಮಾಡುವ ಮಹತ್ವದ ಯೋಜನೆಯನ್ನು ಪಾಲಿಕೆ ರೂಪಿಸಿಕೊಂಡಿದೆ. ಇದೀಗ ಮೂರನೇ ಹಂತದ ಹಸ್ತಾಂತರ ಪ್ರಕ್ರಿಯೆ ಹಾಗೂ ಸಿಬ್ಬಂದಿ ಪ್ರತಿಭಟನೆಯಿಂದಾಗಿ ಒಂದು ವಾರ ಅಲ್ಲಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹೀಗಾಗಿ, ನಗರದ ಜನತೆ ಪಾಲಿಕೆಯೊಂದಿಗೆ ಸಹಕರಿಸಬೇಕು’ ಎಂದು ಗೋಪಾಲಕೃಷ್ಣ ಹೇಳಿದರು.

ನೀರಿನ ಕೊರತೆ ಇಲ್ಲ: ‘ನೀರಿನ ಸಮಸ್ಯೆ ಇಲ್ಲ. ನೀರು ಪೂರೈಕೆ ಹಂತದಲ್ಲಿ ವಿದ್ಯುತ್‌ ಸಮಸ್ಯೆ ಆಗುತ್ತಿರುವುದರಿಂದ ಕೆಲವು ನಿರ್ದಿಷ್ಟ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದನ್ನು ಐದು ದಿನಕ್ಕೆ ಶೀಘ್ರವೇ ಬದಲಾಯಿಸಲಾಗುವುದು. ಇನ್ನು ಕೆಲವು ವಾರ್ಡ್‌ಗಳಲ್ಲಿ ಎರಡರಿಂದ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ’ ಎಂದರು.

ಕೆಯುಐಡಿಎಫ್‌ಸಿ ಮುಖ್ಯ ಎಂಜಿನಿಯರ್‌ ಶರಣಪ್ಪ ಸುಲಗಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.