ADVERTISEMENT

ಯಾರ ಒತ್ತಡಕ್ಕೂ ನಾವು ಬಗ್ಗಲ್ಲ.. ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಜೊತೆ ಸಂವಾದ

ಮಾಧ್ಯಮ ಸಂವಾದದಲ್ಲಿ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 6:46 IST
Last Updated 16 ಮಾರ್ಚ್ 2025, 6:46 IST
ಎನ್‌. ಶಶಿಕುಮಾರ್‌, ಪೊಲೀಸ್‌ ಕಮಿಷನರ್‌, ಹು–ಧಾ ಮಹಾನಗರ
ಎನ್‌. ಶಶಿಕುಮಾರ್‌, ಪೊಲೀಸ್‌ ಕಮಿಷನರ್‌, ಹು–ಧಾ ಮಹಾನಗರ   

ಹುಬ್ಬಳ್ಳಿ: ‘ಖಾಕಿ ಬಟ್ಟೆ ಧರಿಸಿ ಅನ್ನ ತಿನ್ನುತ್ತಿದ್ದೇವೆ, ಕುಟುಂಬ ನಿರ್ವಹಿಸುತ್ತಿದ್ದೇವೆ. ಯಾರನ್ನೂ ಓಲೈಸುವ, ಯಾರ ಒತ್ತಡಕ್ಕೂ ಒಳಗಾಗುವ ಅಗತ್ಯ ನಮಗಿಲ್ಲ. ನೈತಿಕತೆ ಕಳೆದುಕೊಂಡು ಕೆಲಸ ನಿರ್ವಹಿಸುವ ಕೀಳುಮಟ್ಟಕ್ಕೆ ಪೊಲೀಸ್‌ ಇಲಾಖೆ ಇಳಿದಿಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಹೇಳಿದರು.

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಾಧ್ಯಮ ಸಂವಾದ’ದಲ್ಲಿ ಮಾತನಾಡಿದ ಅವರು, ‘ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದು ಹಾಗೂ ಅಪರಾಧ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳುವುದು ಪೊಲೀಸ್‌ ಇಲಾಖೆ ಕೆಲಸ. ಕೆಲವು ಗಂಭೀರ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಹಿನ್ನಡೆಯಾಗುತ್ತದೆ. ಅದು ಪೊಲೀಸ್‌ ವೈಫಲ್ಯ ಎನ್ನಲಾಗದು’ ಎಂದರು.

‘ಅಂಗನವಾಡಿಗೆ ಪೂರೈಕೆ ಮಾಡಬೇಕಾದ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಪ್ರಕರಣದ ಪ್ರಮುಖ ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಎನ್ನುವುದು ಒಂದೆಡೆ ಹಿನ್ನೆಡೆಯಾದರೆ, ಅದೇ ಪ್ರಕರಣಕ್ಕೆ ಸಂಬಂಧಿಸಿ 32 ಮಂದಿಯನ್ನು ಸಹ ಬಂಧಿಸಿ ವಿಚಾರಣೆ ನಡೆಸಿದ್ದು ದೊಡ್ಡ ಸಾಧನೆಯೇ. ಪ್ರಮುಖ ಆರೋಪಿಯನ್ನು ಬಂಧನಕ್ಕೆ ಜನಪ್ರತಿನಿಧಿಗಳು ಒತ್ತಡ ಹಾಕುತ್ತಿದ್ದಾರೆಯೇ ಹೊರತು, ಯಾರೊಬ್ಬರೂ ಅವರನ್ನು ಬಂಧಿಸಬೇಡಿ ಎಂದು ನಮಗೆ ಒತ್ತಡ ಹಾಕಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದ್ದು, ನಮ್ಮ ಇಲಾಖೆ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಯಾರು ಸಹ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ’ ಎಂದು ಹೇಳಿದರು.

ADVERTISEMENT

‘ಕಾನೂನು ಕ್ರಮ ಕೈಗೊಳ್ಳುವ ಮೊದಲು ಪ್ರಕರಣ ದಾಖಲಾಗಬೇಕಾಗುತ್ತದೆ. ಪ್ರಕರಣದ ಗಂಭೀರತೆ ಆಧಾರದ ಮೇಲೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜಕೀಯ ಪ್ರೇರಿತ ಗೂಂಡಾಗಳು, ಸಾಮಾನ್ಯ ಗೂಂಡಾಗಳು, ದೊಡ್ಡ ರೌಡಿಗಳು, ಚಿಕ್ಕ ರೌಡಿಗಳು ಎನ್ನುವ ಯಾವ ಭೇದವೂ ಇಲ್ಲ. ಆರೋಪಿಗಳು ಆರೋಪಿಗಳೇ, ರೌಡಿಗಳು ರೌಡಿಗಳೇ. ಅಮಾಯಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ, ಬಲಾಢ್ಯರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಮಾತಲ್ಲಿ ಹುರುಳಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಆರೋಪಿಗಳ ಬಂಧನಕ್ಕೆ ಅಥವಾ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ತದನಂತರ ವಕೀಲರು ಅಥವಾ ಕೋರ್ಟ್‌ ಮೊರೆ ಹೋಗಿ ಪ್ರಕರಣದ ತನಿಖೆಯಿಂದ ದೂರ ಇರುತ್ತಾರೆ. ಗಂಭೀರ ಪ್ರಕರಣದ ಆರೋಪಿಗಳಿಗೆ, ದರೋಡೆಕೋರರಿಗೆ, ಕೊಲೆಗಾರರಿಗೆ, ಪದೇಪದೇ ಅಪರಾಧ ಕೃತ್ಯ ಎಸಗಿ ಸಮಾಜದ ಶಾಂತಿ ಕದಡುವವರಿಗೆ ಕಾನೂನು ಅಡಿ ಶಿಕ್ಷೆಯಾಗಬೇಕೆಂದು ಹಾಗೂ ಪೊಲೀಸರು ತಮ್ಮ ರಕ್ಷಣೆಗಾಗಿ ಪರಿಸ್ಥಿತಿ ಕೈ ಮೀರಿದಾಗ ಆರೋಪಿಗಳ ಕಾಲಿಗೆ ಗುಂಡೇಟು ಹಾಕಲು ಕಾನೂನಿನಲ್ಲಿ ಅವಕಾಶವಿದೆ. ಆರೋಪಿಗಳ ಜೊತೆ ಇಂತಹ ಸಂಘರ್ಷ ಸಾಮಾನ್ಯ’ ಎಂದು ಹೇಳಿದರು.

ಶೇ 15ರಷ್ಟು ಸಿಬ್ಬಂದಿ ಕೊರತೆ: 112 ತುರ್ತು ಸ್ಪಂದನಾ ವ್ಯವಸ್ಥೆಯಲ್ಲಿ ಹು–ಧಾ ಮಹಾನಗರ ರಾಜ್ಯದಲ್ಲಿಯೇ ಮೊದಲ‌ ಸ್ಥಾನದಲ್ಲಿದೆ. 5 ನಿಮಿಷ 20 ಸೆಕೆಂಡ್‌ ಒಳಗೆಯೇ ಕರೆ ಬಂದ ಸ್ಥಳದಲ್ಲಿ ಇರುತ್ತೇವೆ. ಈವರೆಗೆ ಸೈಬರ್‌ ಕ್ರೈಂನಲ್ಲಿ ಅವಳಿನಗರದ ಜನತೆ ₹16 ಕೋಟಿ ಕಳೆದುಕೊಂಡಿದ್ದು, ತಡೆಹಿಡಿದ ಹಣವನ್ನು ಕೋರ್ಟ್‌ ಮುಖಾಂತರ ‌ವಾರಸ್ದಾರರಿಗೆ ತಲುಪಿಸಲಾಗಿದೆ. ವಿದ್ಯಾಗಿರಿ ಮತ್ತು ಉಪನಗರ ಪೊಲೀಸ್‌ ಠಾಣೆಯನ್ನು ವಿಂಗಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಮ್ಮ ಘಟಕದಲ್ಲಿ ಶೇ 15ರಷ್ಟು ಸಿಬ್ಬಂದಿ ಕೊರತೆಯಿದ್ದು, ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಶಶಿಕುಮಾರ್‌ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ರಾಜ್ಯ ಸಮಿತಿ ‌‌‌‌‌‌‌‌ಸದಸ್ಯ ಗಣಪತಿ ಗಂಗೊಳ್ಳಿ ಇದ್ದರು.

Quote - ಆಟೊಗಳಿಗೆ ಮೀಟರ್‌ ಅಳವಡಿಕೆ ಕುರಿತು ಜಿಲ್ಲಾಧಿಕಾರಿ ಮತ್ತು ಆರ್‌ಟಿಒ ಜೊತೆ ಚರ್ಚಿಸಿದ್ದೇನೆ. ಬಾಡಿಗೆ ನೆಪದಲ್ಲಿ ಹೆಚ್ಚುವರಿ ಹಣ ಪಡೆದರೆ ಪ್ರಯಾಣಿಕರು ಸ್ಥಳೀಯ ಠಾಣೆಗೆ ದೂರು ನೀಡಬೇಕು ಎನ್‌. ಶಶಿಕುಮಾರ್‌ ಪೊಲೀಸ್ ಕಮಿಷನರ್‌ ಹು–ಧಾ ಮಹಾನಗರ

Cut-off box - ‘ಬೀಟ್‌ ಪದ್ಧತಿ ಮತ್ತಷ್ಟು ಪರಿಣಾಮಕಾರಿ’ ‘ಹುಬ್ಬಳ್ಳಿ ಧಾರವಾಡ ಮಹಾನಗರದ ಜನಸಂಖ್ಯೆ 20 ಲಕ್ಷಕ್ಕೆ ತಲುಪಿದ್ದು ವಿವಿಧ ಸಂಸ್ಕೃತಿ ಹಾಗೂ ಹಿನ್ನೆಲೆಯಿಂದ ಬಂದ ಜನರು ವಾಸಿಸುತ್ತಿದ್ದಾರೆ. ಪ್ರತಿಯೊಂದು ಬಡಾವಣೆಯೂ ಒಂದೊಂದು ಭಿನ್ನ ಸಾಮಾಜಿಕ ಹಿನ್ನೆಲೆ ಹೊಂದಿದೆ. ಸಹಜವಾಗಿ ಸಂಘರ್ಷಗಳು ನಡೆಯುತ್ತವೆ. ಅಕ್ಕಪಕ್ಕದ ಮನೆಯವರ ಜೊತೆ ಜಗಳ ಮದ್ಯಪಾನಿಗಳ ನಡುವೆ ಕಲಹ ಮಾತುಕತೆಯ ನಡುವೆ ಜಗಳ ಆಕಸ್ಮಿಕವಾಗಿ ಹಲ್ಲೆ ಮತ್ತು ಕೊಲೆ ಕೃತ್ಯಗಳು ನಡೆಯುತ್ತವೆ. ಯೋಜನಾ ಬದ್ಧವಾಗಿ ನಡೆದ ಅಪರಾಧ ಕೃತ್ಯಕ್ಕಿಂತ ಆಕಸ್ಮಿಕವಾಗಿ ನಡೆದ ಅಪರಾಧ ಕೃತ್ಯಗಳೇ ಹೆಚ್ಚು. ಸಂಭವನೀಯ ಎಷ್ಟೋ ಅಪರಾಧ ಪ್ರಕರಣಗಳನ್ನು ಸಹ ಪೊಲೀಸರು ತಪ್ಪಿಸಿದ್ದಾರೆ. ಆದರೂ ಬೀಟ್‌ ಪದ್ಧತಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಯತ್ನಿಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದರು.

Cut-off box - ‘ಸಂಚಾರ ಸಮಸ್ಯೆ ಸಮನ್ವಯ ಯೋಜನೆ’ ‘ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕಿಂತ ದಂಡ ವಸೂಲಿಯೇ ಮುಖ್ಯವಾಗಿದೆ’ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್‌ ‘ಅವಳಿನಗರದ ಸಂಚಾರ ವ್ಯವಸ್ಥೆ ಬಗ್ಗೆ ನನಗೂ ಅಸಮಾಧಾನವಿದೆ. ಎಲ್ಲ ಇಲಾಖೆಯ ಜೊತೆ ಚರ್ಚಿಸಿ ಐದು ವರ್ಷದ ಮುಂದಾಲೋಚನೆ ಇಟ್ಟುಕೊಂಡು ಸಮನ್ವಯದ ಯೋಜನೆ ರೂಪಿಸಬೇಕಿದೆ’ ಎಂದರು. ಹುಬ್ಬಳ್ಳಿ ವ್ಯಾಪಾರಕ್ಕೆ ಪ್ರಸಿದ್ಧಿಯಾಗಿದ್ದು ಸಹಜವಾಗಿ ಜನರ ಹಾಗೂ ವಾಹನಗಳ ಓಡಾಟ ಹೆಚ್ಚಿದೆ. ಕೆಲವು ಪ್ರದೇಶಗಳಲ್ಲಿ ಅಂಗಡಿ ಜಾಸ್ತಿಯಿದ್ದು ಇಕ್ಕಟ್ಟಾದ ರಸ್ತೆಗಳು ಇವೆ. ಕೆಲವು ಮನೆಗಳ ಹಾಗೂ ಕಟ್ಟಡಗಳ ಎದುರು ವಾನಗಳನ್ನು ನಿಲ್ಲಿಸಲು ಸ್ಥಳವೇ ಇಲ್ಲ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿವೆ. ಜೊತೆಗೆ ಮೇಲ್ಸೇತುವೆ ಕಾಮಗಾರಿ ರಸ್ತೆ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಸಹಜವಾಗಿ ವಾಹನ ದಟ್ಟಣೆ ಏರ್ಪಡುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ದಂಡ ಹಾಕಬೇಕು ಅನ್ಯಥಾ ವಾಹನಗಳನ್ನು ತಡೆದು ಸವಾರರಿಗೆ ಕಿರಿಕಿರಿ ನೀಡಬಾರದು ಎಂದು ಸಿಬ್ಬಂದಿಗೆ ಸೂಚಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.