ADVERTISEMENT

ಹುಬ್ಬಳ್ಳಿ| ನೇಕಾರರ ಆರ್ಥಿಕ ಪುನಶ್ಚೇತನಕ್ಕೆ ಕ್ರಮ: ಬಿ.ನಾಗೇಂದ್ರಕುಮಾರ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:18 IST
Last Updated 17 ಅಕ್ಟೋಬರ್ 2025, 5:18 IST
ಹುಬ್ಬಳ್ಳಿಯಲ್ಲಿನ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅವರಿಗೆ ಗುರುವಾರ ನೇಕಾರರು ಮನವಿ ಸಲ್ಲಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವಾರ್ ಹಾಜರಿದ್ದರು
ಹುಬ್ಬಳ್ಳಿಯಲ್ಲಿನ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅವರಿಗೆ ಗುರುವಾರ ನೇಕಾರರು ಮನವಿ ಸಲ್ಲಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವಾರ್ ಹಾಜರಿದ್ದರು   

ಹುಬ್ಬಳ್ಳಿ: ‘ರಾಜ್ಯದಲ್ಲಿ ನೇಕಾರರ ಸಮಸ್ಯೆ ಪರಿಹರಿಸಿ, ಅವರ ಆರ್ಥಿಕ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ  ಬಿ.ನಾಗೇಂದ್ರಕುಮಾರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಸ್ತುತ ಆಧುನಿಕ ಯಂತ್ರಗಳಲ್ಲಿ ತಯಾರಾದ ಬಟ್ಟೆಗಳನ್ನು ಜನರು ಹೆಚ್ಚು ಬಳಸುತ್ತಾರೆ. ಅವುಗಳ ಬಳಕೆ ಕಡಿಮೆ ಮಾಡಿ ಕೈಮಗ್ಗದಲ್ಲಿ ನೇಯ್ದ ಬಟ್ಟೆಗಳನ್ನು ಬಳಸುವಂತೆ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

‘ಕೈಮಗ್ಗ ಅಭಿವೃದ್ಧಿ ನಿಗಮದಿಂದ ತಯಾರಾಗುವ ರೇಷ್ಮೆ ಸೀರೆ, ಪಂಚೆ, ಕಾಟನ್ ಸೀರೆಗಳು ಮಾಲ್‌ಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತವೆ. ಶೇ 25 ರಿಂದ 30ರಷ್ಟು ರಿಯಾಯಿತಿ ನೀಡಲಾಗುತ್ತದೆ. ನಿಗಮದಿಂದ ಬಟ್ಟೆ ಖರೀದಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದರು. 

ADVERTISEMENT

‘ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲಾಗುವುದು. ನಿಗಮದಲ್ಲಿ ತಯಾರಾಗುವ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇದ್ದು, ಬೇಡಿಕೆ ಕಡಿಮೆ ಇದೆ. ಅದನ್ನು ಪೂರೈಸಲು ಆರ್ಥಿಕ ಸಂಪನ್ಮೂಲದ ಕೊರತೆ ಇದೆ. ನಿಗಮಕ್ಕೆ ಶಕ್ತಿ ತುಂಬುವ ಕೆಲಸವನ್ನು ಎಲ್ಲರ ಸಹಕಾರದಿಂದ ಮಾಡಲಾಗುವುದು. ಅಭಿವೃದ್ಧಿಯತ್ತ ಮುನ್ನಡೆಸಲು ಶ್ರಮಿಸಲಾಗುವುದು’ ಎಂದು ಹೇಳಿದರು. 

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವಾರ್‌ ಮಾತನಾಡಿ, ರೇಷ್ಮೆ ಬಟ್ಟೆ ನೇಯುವ 175 ಮತ್ತು ಕಾಟನ್ ಬಟ್ಟೆ ನೇಯುವ 3260 ಸೇರಿದಂತೆ ಒಟ್ಟು 3435 ನೇಕಾರರು ಇದ್ದಾರೆ. ನೇಕಾರರಿಗೆ 2016ರ ನಂತರ ನಿವೇಶನ ಹಂಚಿಕೆ ಆಗಿಲ್ಲ. ಈ ಬಗ್ಗೆ 196 ಅರ್ಜಿಗಳು ಬಾಕಿ ಇವೆ ಎಂದು ತಿಳಿಸಿದರು.

ನಿಗಮದ ಜಂಟಿ ನಿರ್ದೇಶಕ ಶ್ರೀನಿವಾಸ, ಉಪನಿರ್ದೇಶಕಿ ಅನುಪಮಾ ಕೆ.ಎಸ್., ಗಣೇಶ, ಜಯರಾಮ್, ಸುರೇಶ, ಬಸವರಾಜ ಇದ್ದರು.

ನಿವೇಶನ ನೀಡಲು ನೇಕಾರರ ಮನವಿ

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಅವರು ಗುರುವಾರ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ನಂತರ ಅಧಿಕಾರಿಗಳು ನೇಕಾರರೊಂದಿಗೆ ಸಭೆ ನಡೆಸಿದರು. ಈ ವೇಳೆ ನೇಕಾರರು ನಿಗಮದ ಹುಬ್ಬಳ್ಳಿ ಉಪಕೇಂದ್ರದಲ್ಲಿ ಏಳು ನೇಕಾರರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಇದರಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಾಗಿದೆ. ಕೂಡಲೇ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ನೇಕಾರರು ಮನವಿ ಮಾಡಿದರು. ವಿದ್ಯಾನಗರದ ನೇಕಾರ ಕಾಲೊನಿಯಲ್ಲಿ ಖಾಲಿ ಜಾಗ ಇದ್ದು ಅಲ್ಲಿ ನಿವೇಶನ ಹಂಚಿಕೆ ಮಾಡಬೇಕು. ನಿವೇಶನಕ್ಕಾಗಿ ಶೇ 50ರಷ್ಟು ಹಣವನ್ನು ನೇಕಾರರು ಪಾವತಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ಹೊರೆಯಾಗುತ್ತದೆ. ಶೇ 10ರಷ್ಟು ಹಣವನ್ನು ಕಂತುಗಳ ರೂಪದಲ್ಲಿ ತುಂಬಲು ಅವಕಾಶ ಕಲ್ಪಿಸಿ ನಿವೇಶನ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.