ADVERTISEMENT

ಅಹೋರಾತ್ರಿ ಗಾನಯೋಗಿ ಸ್ವರ ಉತ್ಸವ ಫೆ. 20 ರಂದು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 12:33 IST
Last Updated 17 ಫೆಬ್ರುವರಿ 2021, 12:33 IST

ಧಾರವಾಡ: ‘ಸಂಗೀತ ಗ್ರಾಮ ಮತ್ತು ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಆಶ್ರಯದಲ್ಲಿ ಫೆ.20ರಂದು ಸಂಜೆ 6ಕ್ಕೆ ಡಾ. ಮಲ್ಲಿಕಾರ್ಜುನ ಮನ್ಸೂರ‌ ಕಲಾಭವನದಲ್ಲಿ, ‘ಅಹೋರಾತ್ರಿ ಗಾನಯೋಗಿ ಸ್ವರ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಸಂಗೀತ ಗ್ರಾಮದ ಅಧ್ಯಕ್ಷ ಪಂ. ಸೋಮನಾಥ ಮರಡೂರ ಹೇಳಿದರು.

‘ಉತ್ಸವದಲ್ಲಿ ಧಾರವಾಡ ಪರಂಪರೆಯ ಹಿರಿಯ ಗಾಯಕ ಪಂ.ಸೋಮನಾಥ ಮರಡೂರ, ದೆಹಲಿಯ ಪದ್ಮಭೂಷಣ ಪಂ.ರಾಜನ್ ಮಿಶ್ರಾ ಮತ್ತು ಸಾಜನ್ ಮಿಶ್ರಾ, ಧಾರವಾಡದ ಪಂ.ಶ್ರೀಪಾದ ಹೆಗಡೆ ಕಂಪ್ಲಿ, ಹುಬ್ಬಳ್ಳಿಯ ಪಂ.ಜಯತೀರ್ಥ ಮೇವುಂಡಿ, ಪುಣೆಯ ಅನುರಾಧಾ ಕುಬೇರ, ಸಂಗೀತಾ ಮರಡೂರ ಅವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೊಲ್ಕತ್ತದ ತಬಲಾ ಕಲಾವಿದ ಪಂ.ಅನಿಂದೋ ಚಟರ್ಜಿ ಅವರು ತಬಲಾ ಸೋಲೋ, ಕೊಳಲು ಮಾಂತ್ರಿಕ ಪಂ.ಪ್ರವೀಣ ಗೋಡಖಿಂಡಿ ಮತ್ತು ಷಡ್ಜ ಗೋಡಖಿಂಡಿ ಅವರು ಕೊಳಲು ದ್ವಂದ್ವ ವಾದನ ಕಾರ್ಯಕ್ರಮ ನೀಡಲಿದ್ದಾರೆ. ಪುಣೆಯ ರಯಿಸ್ ಬಾಲೆಖಾನ್ ಮತ್ತು ಬೆಂಗಳೂರಿನ ಹಫೀಜ್ ಬಾಲೆಖಾನ್ ಸಿತಾರ ದ್ವಂದ್ವ ವಾದನ ಪ್ರಸ್ತುತ ಪಡಿಸಲಿದ್ದಾರೆ. ತಬಲಾದಲ್ಲಿ ಬೆಂಗಳೂರಿನ ಪಂ.ರವೀಂದ್ರ ಯಾವಗಲ್, ಪುಣೆಯ ಪಂ.ರಾಮದಾಸ್ ಪಲ್‌ಸುಲೆ, ಗೋವಾದ ಡಾ.ಉದಯ ಕುಲಕರ್ಣಿ ಹಾಗೂ ಪುಣೆಯ ಪಾಂಡುರಂಗ ಪವಾರ ತಬಲಾ ಸಾಥ್ ಸಂಗತ ನೀಡುವರು. ಹಾರ್ಮೊನಿಯಂನಲ್ಲಿ ಬೆಳಗಾವಿಯ ಡಾ.ಸುಧಾಂಶು ಕುಲಕರ್ಣಿ, ಧಾರವಾಡದ ಗುರುಪ್ರಸಾದ ಹೆಗಡೆ, ಬೆಂಗಳೂರಿನ ಸತೀಶ ಕೊಳ್ಳಿ, ಪುಣೆಯ ಸೌಮಿತ್ರ ಕ್ಷೀರಸಾಗರ ಅವರು ಸಾಥ್ ನೀಡಲಿದ್ದಾರೆ’ ಎಂದರು.

ADVERTISEMENT

‘ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಉಪವಿಭಾಗಾಧಿಕಾರಿ ಡಾ.ಗೋಪಾಲ್ ಕೃಷ್ಣ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳುವರು.ಸಾನ್ನಿಧ್ಯವನ್ನು ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ರಘುವೀರಾನಂದ ಸ್ವಾಮಿಜಿ ಮತ್ತು ಗದಗನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ವಹಿಸುವರು’ ಎಂದು ಹೇಳಿದರು.

‘ಇದೇ ವೇಳೆ ಪರಿಸರ ವಾದಿ ಪಂಚಯ್ಯ ಹಿರೇಮಠ ಮತ್ತು ಹುಬ್ಬಳ್ಳಿಯ ಕಲಾಪೋಷಕ ಜಿ.ಆರ್.ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು’ ಎಂದರು.

ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ, ಶ್ರೀಧರ ಮಾಂಡ್ರೆ, ಶಿವಾನಂದ ಸಂಗನಗೌಡರ, ಪಂ.ಕುಮಾರ ಮರಡೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.