ADVERTISEMENT

ಚಿನ್ನದ ಪದಕ ಗೆದ್ದು ತರುವೆ: ಸ್ಫೂರ್ತಿ ತುಂಬಿದ ಸ್ವರೂಪ್‌

ರಾಜ್ಯ ಮಟ್ಟದ ಪ್ಯಾರಾ ಶೂಟಿಂಗ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:15 IST
Last Updated 12 ಸೆಪ್ಟೆಂಬರ್ 2021, 17:15 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಟೂರ್ನಿಯ ಸಮಾರೋಪದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಶೂಟರ್‌ ಸ್ವರೂಪ್ ಉನಲಕರ್‌ ಅವರನ್ನು ಅತಿಥಿಗಳು ಸನ್ಮಾನಿಸಿದರು
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಟೂರ್ನಿಯ ಸಮಾರೋಪದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಶೂಟರ್‌ ಸ್ವರೂಪ್ ಉನಲಕರ್‌ ಅವರನ್ನು ಅತಿಥಿಗಳು ಸನ್ಮಾನಿಸಿದರು   

ಹುಬ್ಬಳ್ಳಿ: ಕೋವಿಡ್‌ ಹಾಗೂ ಲಾಕ್‌ಡೌನ್‌ ಇದ್ದ ಕಾರಣ ಅಭ್ಯಾಸಕ್ಕೆ ಬಹಳಷ್ಟು ತೊಂದರೆಯಾಗಿತ್ತು. ಇದರ ನಡುವೆಯೂ ಇದ್ದಲ್ಲಿಯೇ ಸೌಲಭ್ಯಗಳನ್ನು ಹೊಂದಿಸಿಕೊಂಡು ಅಭ್ಯಾಸ ಮಾಡಿ ಪ್ಯಾರಾಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದೆ. ಮುಂದಿನ ಬಾರಿ ಚಿನ್ನದ ಪದಕ ಗೆದ್ದು ನಿಮ್ಮ ಮುಂದೆ ಬರುವೆ ಎಂದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಶೂಟರ್‌ ಸ್ವರೂಪ್‌ ಉನಲಕರ್‌ ಹೇಳಿದರು.

ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್‌ ಅಕಾಡೆಮಿ (ಎಚ್‌ಎಸ್‌ಎಸ್‌ಎ)ಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಟೂರ್ನಿಯ ಸಮಾರೋಪದಲ್ಲಿ ಮಾತನಾಡಿದ ಅವರು ‘ನನ್ನಿಂದ ಎಲ್ಲವೂ ಸಾಧ್ಯ ಎನ್ನುವುದಾದರೆ ನಿಮ್ಮೆಲ್ಲರಿಂದಲೂ ದೊಡ್ಡ ಸಾಧನೆ ಖಂಡಿತವಾಗಿಯೂ ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮ, ಬದ್ಧತೆ ಮತ್ತು ನಿರಂತರ ಅಭ್ಯಾಸ ಮಾಡಿದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು. ನಿಮ್ಮೆಲ್ಲರಲ್ಲಿಯೂ ಆ ಶಕ್ತಿಯಿದೆ’ ಎಂದು ಸ್ಫೂರ್ತಿ ತುಂಬಿದರು.

ಒಲಿಂಪಿಯನ್‌ ಶೂಟರ್‌ ಪಿ.ಎನ್‌. ಪ್ರಕಾಶ ಮಾತನಾಡಿ ‘ನಿಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡರೆ ಎತ್ತರಕ್ಕೆ ಏರುವುದು ಕಷ್ಟವಲ್ಲ’ ಎಂದರು.

ADVERTISEMENT

ಶಾಸಕ ಜಗದೀಶ ಶೆಟ್ಟರ್‌ ‘ಒಲಿಂಪಿಕ್ಸ್‌ನಲ್ಲಿ ನಮ್ಮವರ ಸಾಧನೆ ಭಾರತ ಕ್ರೀಡಾಲೋಕದಲ್ಲಿ ಹೊಸ ಅಲೆ ಹುಟ್ಟುಹಾಕಿದೆ. ಸಾಮಾನ್ಯ ಕುಟುಂಬದಿಂದ ಬಂದ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರು. ಅವರಂತೆ ಎಲ್ಲರೂ ಸಾಧನೆ ಮಾಡಬಹುದು. ಇದಕ್ಕೆ ಸಾಕಷ್ಟು ಶ್ರಮಬೇಕು’ ಎಂದರು.

ಭಾರತೀಯ ವಾಯುಸೇನೆಯ ನಿವೃತ್ತ ಏರ್‌ ಕಮಾಂಡರ್‌ ಸಿ.ಎಸ್‌. ಹವಲ್ದಾರ್‌ ಮಾತನಾಡಿ ‘ಕ್ರೀಡೆಯಲ್ಲಿ ಅಪಾರವಾದ ಶಕ್ತಿಯಿದೆ. ಜನರ ನಡುವೆ ಬಾಂಧವ್ಯ ಬೆಸೆಯುವ ಕೆಲಸವನ್ನು ಕ್ರೀಡೆ ಮಾಡುತ್ತದೆ. ನಮ್ಮಲ್ಲಿ ಪ್ರತಿಭಾನ್ವಿತರಿದ್ದರೂ ಅವರಿಗೆ ಅವಳಿ ನಗರದಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದರು.

ಕರ್ನಾಟಕ ರಾಜ್ಯ ಅಂಗವಿಕಲರ ಸಂಸ್ಥೆ ಅಧ್ಯಕ್ಷ ಎಂ. ಮಹದೇವ, ಸ್ವರ್ಣ ಗ್ರೂಪ್‌ ಆಫ್‌ ಕಂಪನಿಯ ನಿರ್ದೇಶಕ ಎಸ್‌ವಿಎಸ್‌ ಪ್ರಸಾದ, ಕಾಂಗ್ರೆಸ್‌ ಮುಖಂಡ ಸದಾನಂದ ಡಂಗವನರ, ಬಿಎಸ್‌ಕೆ ಟ್ರಸ್ಟ್‌ ಅಧ್ಯಕ್ಷ ವೀರಣ್ಣ ಕಲ್ಲೂರ, ಎಚ್‌ಎಸ್‌ಎಸ್‌ಎ ಸಂಸ್ಥಾಪಕ ಶಿವಾನಂದ ಬಾಲೆಹೊಸೂರ, ರಾಜ್ಯ ಪ್ಯಾರಾ ಶೂಟಿಂಗ್‌ ಸಂಸ್ಥೆ ಕಾರ್ಯದರ್ಶಿ ರವಿಚಂದ್ರ ಬಾಲೆಹೊಸೂರ, ಸದಸ್ಯೆ ಶಿಲ್ಪಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.