ADVERTISEMENT

ಗಾಳಿ ಆರ್ಭಟ: ಹೆಸ್ಕಾಂಗೆ ₹25 ಲಕ್ಷ ನಷ್ಟ

ಹುಬ್ಬಳ್ಳಿಯ ವಿವಿಧೆಡೆ ನೆಲಕ್ಕುರುಳಿದ 60 ವಿದ್ಯುತ್ ಕಂಬಗಳು

​ಪ್ರಜಾವಾಣಿ ವಾರ್ತೆ
Published 6 ಮೇ 2022, 6:04 IST
Last Updated 6 ಮೇ 2022, 6:04 IST
ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹುಬ್ಬಳ್ಳಿಯ ಶಾಂತಿ ಕಾಲೊನಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು
ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹುಬ್ಬಳ್ಳಿಯ ಶಾಂತಿ ಕಾಲೊನಿಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬಗಳು   

ಹುಬ್ಬಳ್ಳಿ: ಭಾರೀ ಗಾಳಿಯೊಂದಿಗೆ ಬುಧವಾರ ಸುರಿದ ಮಳೆಗೆ ನಗರದಾದ್ಯಂತ ಅಂದಾಜು 60 ವಿದ್ಯುತ್ ಕಂಬಗಳು ನೆಲ ಕಚ್ಚಿದ್ದು, ಎರಡು ವಿದ್ಯುತ್ ಪರಿವರ್ತಕಗಳು ಸ್ಥಗಿತಗೊಂಡಿವೆ. ಗಾಳಿ ಆರ್ಭಟದೊಂದಿಗೆ ಅರ್ಧತಾಸು ಸುರಿದ ಮಳೆಗೆ ಹೆಸ್ಕಾಂಗೆ ಅಂದಾಜು ₹25 ಲಕ್ಷ ನಷ್ಟವಾಗಿದೆ.

ವಿಶ್ವೇಶ್ವರ ನಗರ, ವಿಜಯನಗರ, ಗುಜರಾತ್ ಭವನ, ಅಜಂತಾ ಹೋಟೆಲ್, ಹಳೇ ಹುಬ್ಬಳ್ಳಿ, ಕೈಗಾರಿಕಾ ಪ್ರದೇಶ, ಉಣಕಲ್, ಅಶೋಕನಗರ, ವಿದ್ಯಾನಗರ, ಶಿರೂರು ಪಾರ್ಕ್, ಬಾಪೂಜಿ ನಗರ, ಕಿಮ್ಸ್ ನಗರದ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಗುರುವಾರದ ಸಂಜೆಯವರೆಗೂ ಸತತ ವಿದ್ಯುತ್‌ ಸಂಪರ್ಕ ಸಾಧ್ಯವಾಗಿಲ್ಲ.

ಮುಗಿಯದ ಕಾರ್ಯಾಚರಣೆ: ಭಾರೀ ಗಾತ್ರದ ಮರಗಳು ಹಾಗೂ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದಾಗಿಕೆಲವೆಡೆ ಕಂಬಗಳು ಮುರಿದಿವೆ. ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಬುಧವಾರ ಸಂಜೆಯಿಂದಲೇ ಮರ ಹಾಗೂ ಕಂಬಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಗುರುವಾರ ಸಂಜೆಯೂ ಗಾಳಿ ಸಮೇತ ಕೆಲ ಹೊತ್ತು ಮಳೆ ಸುರಿದಿದ್ದರಿಂದ, ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ADVERTISEMENT

ಇನ್ನೂ ಬಂದಿಲ್ಲ: ‘ಮನೆಗೆ ಹೊಂದಿಕೊಂಡಂತಿದ್ದ ವಿದ್ಯುತ್ ಕಂಬ ಕಾಂಪೌಂಡ್ ಮೇಲೆ ಬಿದ್ದಿದೆ. ಈ ಕುರಿತು ರಾತ್ರಿಯೇ ಹೆಸ್ಕಾಂನವರಿಗೆ ಮಾಹಿತಿ ನೀಡಿದ್ದೇವೆ. ಆದರೆ, ಮಧ್ಯಾಹ್ನವಾದರೂ ಯಾರೂ ಇತ್ತ ತಲೆ ಹಾಕಿಲ್ಲ. ಮಕ್ಕಳು ಸೇರಿದಂತೆ ಹಲವು ಮಂದಿ ಮನೆ ಮುಂದೆ ಓಡಾಡುತ್ತಾರೆ. ಆ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ ಯಾರು ಹೊಣೆ? ಆದಷ್ಟು ಬೇಗ ಮನೆ ಬಳಿ ಬಿದ್ದಿರುವ ಕಂಬವನ್ನು ತೆರವುಗೊಳಿಸಬೇಕು’ ಎಂದು ಬಾಪೂಜಿನಗರದ ಹನುಮಂತ ಒತ್ತಾಯಿಸಿದರು.

‘ಹಲವು ವರ್ಷಗಳಾದರೂ ಸ್ಥಳಾಂತರಿಸದ ವಿದ್ಯುತ್ ಕಂಬಗಳು ಶಿಥಿಲಗೊಂಡು, ಜೋರಾಗಿ ಗಾಳಿ ಬೀಸಿದಾಗ ನೆಲಕ್ಕುರುಳುತ್ತವೆ. ಮತ್ತೆ ಇಂತಹ ಅನಾಹುತವಾಗಿ ಸಾವು–ನೋವು ಸಂಭವಿಸುವುದಕ್ಕೆ ಮುಂಚೆ ನಗರದ ವಿವಿಧೆಡೆ ಇರುವ ಹಳೆಯ ಕಂಬಗಳನ್ನು ಸ್ಥಳಾಂತರಿಸಬೇಕು. ಮಳೆಗಾಲ ಆರಂಭಕ್ಕೂ ಮುಂಚೆಯೇ ಈ ಕೆಲಸವಾಗಬೇಕು. ಇಲ್ಲದಿದ್ದರೆ, ಆಗಲೂ ಇದೇ ರೀತಿ ಸಮಸ್ಯೆಯಾಗುತ್ತದೆ’ ಎಂದು ಹೇಳಿದರು.

‘ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ’

‘ಕಂಬಗಳು ಬಿದ್ದು ವಿದ್ಯುತ್ ಜಾಲ ಗ್ರೌಂಡ್ ಆದ ತಕ್ಷಣ ವಿದ್ಯುತ್ ಉಪ ಕೇಂದ್ರಗಳಲ್ಲಿನ ಸ್ವಿಚ್‌ಗಳು ಸ್ವಯಂಚಾಲಿತವಾಗಿ ಡ್ರಿಪ್ ಆಗುತ್ತವೆ. ಹಾಗಾಗಿ, ಕಂಬಗಳು ಬಿದ್ದಾಗ ವಿದ್ಯುತ್ ಅನಾಹುತ ಸಂಭವಿಸುವ ಸಾಧ್ಯತೆ ಕಮ್ಮಿ ಇರುತ್ತದೆ. ಅಲ್ಲದೆ, ಕಂಬ ಬೀಳುವ ಮಾಹಿತಿ ದೊರೆತ ತಕ್ಷಣ ಹೆಸ್ಕಾಂ ಸಿಬ್ಬಂದಿಗೆ ತಲುಪುವ ಜೊತೆಗೆ, ಸಾರ್ವಜನಿಕರೂ ಹೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಹಾಗಾಗಿ, ಕಾರ್ಯಾಚರಣೆ ಬೇಗನೆ ನಡೆಯುತ್ತದೆ. ಬಿದ್ದಿರುವ ಶೇ 70ಕ್ಕೂ ಹೆಚ್ಚು ಕಂಬಗಳನ್ನು ಮರು ಅಳವಡಿಸಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೆಸ್ಕಾಂ ಹುಬ್ಬಳ್ಳಿ ನಗರ ವಿಭಾಗದ ಸಹಾಯಕ ಎಂಜಿನಿಯರ್ ಜಿ. ಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.