ADVERTISEMENT

ಆಶ್ರಯ ಯೋಜನೆಯಡಿ ಮನೆ ನೀಡಿಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 4:14 IST
Last Updated 6 ಡಿಸೆಂಬರ್ 2022, 4:14 IST
ಸೂರು ಇಲ್ಲದವರಿಗೆ ಸೂರು ನೀಡುವಂತೆ ಒತ್ತಾಯಿಸಿ ನೂರಾರು ಮಹಿಳೆಯರು ಕರ್ನಾಟಕ ರಾಜ್ಯ ಬಡವರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿರಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೂರು ಇಲ್ಲದವರಿಗೆ ಸೂರು ನೀಡುವಂತೆ ಒತ್ತಾಯಿಸಿ ನೂರಾರು ಮಹಿಳೆಯರು ಕರ್ನಾಟಕ ರಾಜ್ಯ ಬಡವರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿರಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಂತ ಸೂರು ಇಲ್ಲದ ಬಡವರಿಗೆ ಆಶ್ರಯ ಯೋಜನೆಯಡಿ ಮನೆ ನೀಡಬೇಕು ಎಂದು ಒತ್ತಾಯಿಸಿ ನೂರಾರು ಮಹಿಳೆಯರು ಕರ್ನಾಟಕ ರಾಜ್ಯ ಬಡವರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.‌

ಮನೆ ಇಲ್ಲದೇ ನೂರಾರು ಬಡವರು ಬೀದಿ ಬದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಬಾಡಿಗೆ ಮನೆಯಲ್ಲಿ ಮಾಲೀಕರ ಕಿರಿಕಿರಿ ನಡುವೆ ಜೀವನ ಸಾಗಿಸುತ್ತಿದ್ದಾರೆ. ಅಂತವರನ್ನು ಗುರುತಿಸಿ ಆಶ್ರಯ ಮನೆ ಯೋಜನೆಯಡಿ ಸರ್ಕಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗೆಯಲ್ಲಿ ಸೂರು ಕಲ್ಪಸಿ ಕೊಡುವ ಮೂಲಕ ಬಡವರಿಗೆ ನೆರಳಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂಬಂಧ ಹಲವು ಬಾರಿ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಘೋಷಣೆ ಮಾಡಿದರೂ ಯಾರಿಗೂ ಈವರೆಗೆ ಸೂರು ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಚುನಾವಣೆ ಬಂದಾಗ 8 ಲಕ್ಷ ಮನೆಗಳನ್ನು ಒದಗಿಸಲಾಗುವುದು ಎಂದು ಘೋಷಣೆ ಮಾಡಿದವರು ಈವರೆಗೆ ಒಂದೇ ಒಂದು ಮನೆ ನೀಡಲ್ಲ. ಜನಪ್ರತಿನಿಧಿಗಳಿಗೆ, ಸರ್ಕಾರಗಳಿಗೆ ಬಡವರು ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಆದರೆ, ವರ್ಷವೀಡಿ ಅವರು ಸೂರು ಇಲ್ಲದೇ ಅನುಭವಿಸುತ್ತಿರುವ ಕಷ್ಟಕ್ಕೆ ನಿವಾರಿಸುವಂತೆ ಮನವಿ ಮಾಡಿದರೂ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೇ ಚುನಾವಣೆ ಬಹಿಷ್ಕರಿಸಿ, ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹೇಮಂತ ನಾಡಗೇರ, ಸಿದ್ದಪ್ಪ ಕಡಕೋಳ, ಇಬ್ರಾತಾಲ ಪೀರಜಾದೆ, ನಾಗಪ್ಪ ದಾಡಿಬಾವಿ, ಈರಣ್ಣ ಬಾವಿ, ಜಗದೀಶ ಕೋರಿಶೆಟ್ಟರ, ಫಾತಿಮಾ ದಾವಣಗೇರಿ, ಸಾಮನಸ್ ಅಂಕರೀ, ಲುದಿಯಾ, ಭಾರತಿ, ಅಮುಲಾ ಮೋಹನ್‌, ರಮಾಣಿ, ಸಮಿಯನ್ ಗಂಧಂ, ವಿಜಯ, ಸಾಮ್ಯುವಲ್ ಕೋಪೂಟ, ಮಮತಾಜ ಬೆತ್ತಾವಾಲೆ ಹಾಗೂ ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.