ADVERTISEMENT

ಸಾಹಿತ್ಯ ಶ್ರೀಮಂತಗೊಳಿಸಿದ ಲೇಖಕಿಯರು

ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಥಮ ಸಮ್ಮೇಳನ: ಶಾಸಕ ಪ್ರಸಾದ ಅಬ್ಬಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:42 IST
Last Updated 1 ಫೆಬ್ರುವರಿ 2026, 4:42 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದ ನಿರಂಜನ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌–ಹುಬ್ಬಳ್ಳಿ ನಗರ, ಗ್ರಾಮೀಣ ತಾಲ್ಲೂಕು ಘಟಕದ ಪ್ರಥಮ ಸಮ್ಮೇಳನದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು
ಹುಬ್ಬಳ್ಳಿಯ ಸಿದ್ಧಾರೂಢ ಮಠದ ನಿರಂಜನ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌–ಹುಬ್ಬಳ್ಳಿ ನಗರ, ಗ್ರಾಮೀಣ ತಾಲ್ಲೂಕು ಘಟಕದ ಪ್ರಥಮ ಸಮ್ಮೇಳನದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು   

ಹುಬ್ಬಳ್ಳಿ: ‘ಕನ್ನಡ ಸಾಹಿತ್ಯಕ್ಕೆ ಸುದೀರ್ಘ ಮತ್ತು ಸಮೃದ್ಧ ಇತಿಹಾಸವಿದೆ. ಮಹಿಳೆಯರು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. 

ನಗರದ ಸಿದ್ಧಾರೂಢ ಮಠದ ನಿರಂಜನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್‌ ಹುಬ್ಬಳ್ಳಿ ನಗರ, ಗ್ರಾಮೀಣ ತಾಲ್ಲೂಕು ಘಟಕದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. 

‘ಹೆಣ್ಣು ಅಬಲೆಯಲ್ಲ ಸಬಲೆ ಎಂದು ಪ್ರತಿ ಹಂತದಲ್ಲೂ ಸಾಬೀತು ಮಾಡುತ್ತಾ ಬಂದಿದ್ದಾಳೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಲೇಖಕಿಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ’ ಎಂದರು.

ADVERTISEMENT

‘ಸಮಾಜದಲ್ಲಿ ಜಿಡ್ಡುಗಟ್ಟಿದ್ದ ವ್ಯವಸ್ಥೆ, ಅನಿಷ್ಟ ಪದ್ಧತಿ ವಿರುದ್ಧ 12ನೇ ಶತಮಾನದಲ್ಲೇ ವಚನ ಸಾಹಿತ್ಯದ ಮೂಲಕ ವಚನಕಾರ್ತಿಯರು ಹೊಸ ಕ್ರಾಂತಿ ಮಾಡಿದರು. 20ನೇ ಶತಮಾನದಲ್ಲಿ ಮೂಢನಂಬಿಕೆ ಮತ್ತು ಪುರುಷ ಪ್ರಧಾನ ಸಮಾಜದ ಕಟ್ಟುಪಾಡು ವಿರೋಧಿಸಿ ಹಲವು ಲೇಖಕಿಯರು ಜಾಗೃತ ಸಾಹಿತ್ಯ ಪ್ರಕಟಿಸಿದರು. ಸಾಮಾಜಿಕ ಬದಲಾವಣೆಯಲ್ಲಿ ಮಹಿಳಾ ಸಾಹಿತ್ಯವೂ ಪ್ರಮುಖ ಪಾತ್ರ ವಹಿಸಿದೆ’ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣಗಳಿಂದಾಗಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕಿದೆ. ಇದರಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ’ ಎಂದರು. 

ಪರಿಷತ್‌ ಸಂಸ್ಥಾಪಕ ಗಂಗಾಧರ ದೊಡ್ಡವಾಡ ಸ್ವಾಗತಿಸಿದರು. ಲಲಿತಾ ಕಮ್ಮಾರ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಲೀಲಕ್ಕ ಚಂದ್ರಕಾಂತ ಬೆಲ್ಲದ, ಪ್ರಭಾವತಿ ಹಾದಿಮನಿ, ಪಂಕಜಾ ಬ್ಯಾಕೋಡ, ತಾರಾದೇವಿ ವಾಲಿ, ಅನ್ನಪೂರ್ಣಮ್ಮ ಅಗಡಿ, ಸುಮಾದೇವಿ ಹಿರೇಮಠ, ಶಾರೂಖಾನ ಮುಲ್ಲ ಇದ್ದರು. 

‘ಮಹಿಳೆಗೆ ಸಿಗದ ಅಧ್ಯಕ್ಷೆ ಸ್ಥಾನ’ ‘

ಕನ್ನಡ ಸಾಹಿತ್ಯ ಕ್ಷೇತ್ರ ಸೇರಿದಂತೆ ಸಾಹಿತ್ಯ ಪರಿಷತ್‌ನಲ್ಲಿಯೂ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಪರಿಷತ್‌ ಆಡಳಿತ ಸಮಿತಿಗೆ ಇಂದಿಗೂ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿಲ್ಲ’ ಎಂದು ಸಮ್ಮೇಳನದ ಅಧ್ಯಕ್ಷೆ ಭಾರತಿ ರಾಜಗುರು ಬೇಸರ ವ್ಯಕ್ತಪಡಿಸಿದರು.  ‘ನಾಡಿನಲ್ಲಿ ಎಲೆಮರೆ ಕಾಯಿಯಂತೆ ಸಾಹಿತ್ಯ ಸೇವೆ ಮಾಡುತ್ತಿರುವ ಮಹಿಳಾ ಸಾಹಿತಿಗಳನ್ನು ನಮ್ಮ ಸಾಹಿತ್ಯ ಪರಿಷತ್‌ಗೆ ಸ್ವಾಗತಿಸೋಣ’ ಎಂದರು.  ಕಾರ್ಯಕ್ರಮದ ಆರಂಭದಲ್ಲಿ ಸಮ್ಮೇಳನದ ಅಧ್ಯಕ್ಷೆ ಭಾರತಿ ರಾಜಗುರು ಅವರನ್ನು ಸಿದ್ಧಾರೂಢ ಮಠದ ಮಹಾದ್ವಾರದಿಂದ ಕೈಲಾಸ ಮಂಟಪದವರೆಗೆ ವಾದ್ಯಮೇಳದೊಂದಿಗೆ ಕುದುರೆ ಸಾರೋಟಿನಲ್ಲಿ ಕರೆತರಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.