ADVERTISEMENT

ಆದರ್ಶ ಸ್ಥಿತಿ ಇನ್ನಷ್ಟು ದೂರ

ಮಹಿಳಾ ದಿನ ವಿಶೇಷ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
ಡಾ. ಆರ್.ಅನಿತಾ
ಡಾ. ಆರ್.ಅನಿತಾ   

ಭಾವನೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಆದರೆ ಸಮಾಜ ಬಾಲಕ ಹಾಗೂ ಬಾಲಕಿಯರಲ್ಲಿ ನಿಸರ್ಗದತ್ತವಾಗಿರುವ ಗುಣಗಳನ್ನು ಬಲವಂತದಿಂದ ಹತ್ತಿಕ್ಕುವುದರಿಂದ, ಪುರುಷ ಹಾಗೂ ಮಹಿಳೆ ಎಂಬ ಸಿದ್ಧಸೂತ್ರದಂತೆ ಬೆಳೆಯುವಂತಾಗಿದೆ. ಇದು ಹೋದರೆ ಸಮಾನತೆ ಸಹಜವಾಗಿ ಅನುಷ್ಠಾನಗೊಳ್ಳಲಿದೆ ಸಂವಿಧಾನ, ನೆಲದ ಕಾನೂನುಗಳಿಂದ ಮಹಿಳೆಯರಿಗೆ ಸಮಾನತೆ, ಸ್ಥಾನಮಾನ ದೊರೆತಿರುವುದು ಸತ್ಯ. ಅದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಆದರೆ ಇನ್ನೂ ನಾವು ಅದನ್ನು ಕೇಳುವ ಸ್ಥಿತಿಯಲ್ಲೇ ಇದ್ದೇವೆ. ಹೀಗಾಗಿ ಸಮಾನತೆಯ ಆ ಆದರ್ಶ ಸ್ಥಿತಿ ತಲುಪಲು ಇನ್ನಷ್ಟು ದೂರ ಕ್ರಮಿಸಬೇಕಿದೆ.

ಬಾಲ್ಯದಿಂದಲೇ ಮಕ್ಕಳಿಗೆ ತರುವ ಆಟಿಕೆಗಳ ಮೂಲಕವೇ ಲಿಂಗ ಅಸಮಾನತೆಯ ಮೊದಲ ಅಧ್ಯಾಯ ಆರಂಭವಾಗುತ್ತದೆ. ಹುಡುಗನೊಬ್ಬ ಭಾವುಕನಾಗಿ ಅತ್ತರೆ, ‘ಏಯ್, ಹುಡುಗಿಯಂತೆ ಅಳುತ್ತೀಯಾ’ ಎಂದು ಆತನನ್ನು ಕಠಿಣಗೊಳಿಸುವ ಪ್ರಯತ್ನ ಮಾಡಲಾಗುತ್ತದೆ. ತಾನು ಮೇಲು ಎಂಬುದನ್ನು ಬಾಲ್ಯದಿಂದಲೇ ಬಾಲಕರಿಗೆ ಬಿತ್ತಲಾಗುತ್ತದೆ. ಇದು ಮುಂದೆ ಸಮಾನತೆಯ ವಿಷಯದಲ್ಲಿ ಬಂದಾಗ ಪರಸ್ಪರ ವ್ಯತ್ಯಾಸಗಳು ಕಂಡುಬರುವುದು ಸಹಜ.

ಪತಿ ಹಾಗೂ ಪತ್ನಿ ಇಬ್ಬರೂ ಕೆಲಸದಲ್ಲಿದ್ದಾಗ, ಪತಿಗೆ ಹೆಚ್ಚು ಸಂಬಳ ಹಾಗೂ ಸ್ಥಾನಮಾನವಿದ್ದರೆ ಪತ್ನಿ ಮರುಮಾತಿಲ್ಲದೆ ಗೃಹಿಣಿಯಾಗಿರಲು ಸಿದ್ಧಳಾಗುತ್ತಾಳೆ. ಆದರೆ ಪತ್ನಿಗೇ ಆ ಸ್ಥಾನಮಾನಗಳು ಇದ್ದಾಗ ಎಷ್ಟು ಪುರುಷರು ಮನೆಯಲ್ಲಿದ್ದು ಮನೆಗೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಸಿದ್ಧರಿರುತ್ತಾರೆ? ಇದಕ್ಕೆ ನಮ್ಮ ಸಮಾಜವೇ ಒಪ್ಪುತ್ತದೆಯೇ. ಮನೆಯಲ್ಲಿರುವ ಪುರುಷನನ್ನು ನೋಡುವ ಸ್ಥಿತಿಯೇ ಬೇರೆಯೇ ಆಗಿರುತ್ತದೆ.

ADVERTISEMENT

ಕೆಲಸಕ್ಕೆ ಹೋಗಿ ಬರುವ ಮಹಿಳೆ, ಮನೆಗೆ ಬಂದು ಒಂದು ಲೋಟ ಚಹಾ ಕೇಳಿದರೆ ಸ್ನೇಹಿತನಾಗಿ ಪತಿ ನೀಡಬಹುದು. ಆದರೆ ಇವಳೇನು ಹೀಗೆ ಕೇಳುತ್ತಿದ್ದಾಳೆ ಎಂದೂ ಕೆಲವರ ಮನಸ್ಸಿನಲ್ಲಿ ಸಣ್ಣಗೆ ಹಾದುಹೋಗಲೂಬಹುದು. ಹಾಗೆಯೇ ವೃತ್ತಿ ಸ್ಥಳದಲ್ಲಿ ಅಧಿಕಾರಿಯಾಗಿ ಮಹಿಳೆಯ ಆದೇಶಗಳನ್ನು ಇತರರು ಹಗುರವಾಗಿಯೋ ಅಥವಾ ನಿರ್ಲಕ್ಷತನದಿಂದ ಸ್ವೀಕರಿಸಬಹುದು (ನನ್ನ ವೃತ್ತಿ ಜೀವನದಲ್ಲಿ ಇಂಥ ಸ್ಥಿತಿ ಎದುರಾಗಿಲ್ಲ). ಹೀಗಾಗಿ ಸಮಾನತೆಯ ಆದರ್ಶ ಸ್ಥಿತಿಗೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆಗಳು ಆಗಬೇಕಿದೆ.

-ಡಾ. ಆರ್.ಅನಿತಾ, ಸೂಪರಿಂಟೆಂಡೆಂಟ್, ಧಾರವಾಡದ ಕೇಂದ್ರ ಕಾರಾಗೃಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.