ADVERTISEMENT

ಕಾಂಗ್ರೆಸ್‌ಗೆ ಮುಜುಗರ ತರುವ ಹೇಳಿಕೆ ನೀಡದಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:38 IST
Last Updated 22 ಮೇ 2022, 2:38 IST
ಅಲ್ತಾಫ ಹಳ್ಳೂರ
ಅಲ್ತಾಫ ಹಳ್ಳೂರ   

ಹುಬ್ಬಳ್ಳಿ: ‘ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಮುಖಂಡರು ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ ಹುಸೇನ್ ಹಳ್ಳೂರ ಸೂಚಿಸಿದ್ದಾರೆ.

‘ಟಿಕೆಟ್‌ಗಾಗಿ ಲಾಬಿ, ಪರಸ್ಪರ ಕಿತ್ತಾಟ, ಬೇಜವಾಬ್ದಾರಿಯುತ ಹೇಳಿಕೆ ಮತ್ತು ಬಣ ರಾಜಕೀಯದಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು, ಮುಖಂಡರು ತಮ್ಮ ನಡವಳಿಕೆ ಸುಧಾರಿಸಿಕೊಳ್ಳಬೇಕು. ಬೇರೆ ಪಕ್ಷದ ಕಡೆ ಮುಖ ಮಾಡಿರುವವರಿಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಪಕ್ಷದಲ್ಲಿ ಶಿಸ್ತು ಮುಖ್ಯ’ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಟಿಕೆಟ್ ಆಕಾಂಕ್ಷಿಗಳು ತಾವು ಪ್ರತಿನಿಧಿಸಲು ಉದ್ದೇಶಿಸಿರುವ ಕ್ಷೇತ್ರಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಬೂತ್ ಮಟ್ಟದಿಂದ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಕಾರ್ಯಪ್ರವೃತ್ತರಾಗಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶಿಸ್ತು, ತಾಳ್ಮೆ, ನಿಸ್ವಾರ್ಥ ಕೆಲಸ, ಸುಧಾರಣೆ ಕಾಯ್ದುಕೊಳ್ಳಬೇಕು. ಸಾಮಾಜಿಕ ಸಾಮರಸ್ಯ ಬಲಪಡಿಸಲು ಹಾಗೂ ಸಂವಿಧಾನದ ಮೂಲ ಆಶಯ ರಕ್ಷಿಸಲು ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.