ADVERTISEMENT

ಗುಣಮುಖರಾದವರಿಗೆ ನೈಸರ್ಗಿಕ ‘ಆಮ್ಲಜನಕ ಸಾಂದ್ರಕ’: ಅರಣ್ಯ ಇಲಾಖೆಯಿಂದ ಕೊಡುಗೆ

ವಿಶ್ವ ಪರಿಸರ ದಿನ

ಇ.ಎಸ್.ಸುಧೀಂದ್ರ ಪ್ರಸಾದ್
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ಧಾರವಾಡದ ಕೆ.ಸಿ. ಪಾರ್ಕ್ ಬಳಿ ಇರುವ ಅರಣ್ಯ ಇಲಾಖೆ ನರ್ಸರಿಯಿಂದ ಆಸ್ಪತ್ರೆಗಳಿಗೆ ಒಯ್ಯಲು ಸಸಿಗಳನ್ನು ಹೊತ್ತ ಟ್ರ್ಯಾಕ್ಟರ್‌ನೊಂದಿಗೆ ಯಶಪಾಲ್ ಕ್ಷೀರಸಾಗರ್, ಅಧಿಕಾರಿಗಳು ಹಾಗೂ ಸಿಬ್ಬಂದಿ
ಧಾರವಾಡದ ಕೆ.ಸಿ. ಪಾರ್ಕ್ ಬಳಿ ಇರುವ ಅರಣ್ಯ ಇಲಾಖೆ ನರ್ಸರಿಯಿಂದ ಆಸ್ಪತ್ರೆಗಳಿಗೆ ಒಯ್ಯಲು ಸಸಿಗಳನ್ನು ಹೊತ್ತ ಟ್ರ್ಯಾಕ್ಟರ್‌ನೊಂದಿಗೆ ಯಶಪಾಲ್ ಕ್ಷೀರಸಾಗರ್, ಅಧಿಕಾರಿಗಳು ಹಾಗೂ ಸಿಬ್ಬಂದಿ   

ಧಾರವಾಡ: ಕೋವಿಡ್–19 ಸೋಂಕಿನ 2ನೇ ಅಲೆಯ ಸಂದರ್ಭದಲ್ಲಿ ಎಲ್ಲೆಡೆ ಆಮ್ಲಜನಕಕ್ಕೇ ಹೆಚ್ಚಿನ ಬೇಡಿಕೆ. ಹೀಗಾಗಿ ಈ ಬಾರಿ ವಿಶ್ವ ಪರಿಸರ ದಿನದಂದು ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ನೈಸರ್ಗಿಕ ‘ಆಮ್ಲಜನಕ ಸಂದ್ರಕ’ವನ್ನು ಉಡುಗೊರೆಯಾಗಿ ನೀಡಲುಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದರಿಂದಲೇಸಾಕಷ್ಟು ಸಂಘ ಸಂಸ್ಥೆಗಳು ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಜಿಲ್ಲಾಡಳಿತಕ್ಕೆ ದೇಣಿಗೆಯಾಗಿ ನೀಡುತ್ತಿವೆ. ಆದರೆ, ಭವಿಷ್ಯದಲ್ಲಿ ಯಂತ್ರಗಳ ಬದಲು ಉಚಿತವಾಗಿ ಮತ್ತು ಹೇರಳವಾಗಿ ಆಮ್ಲಜನಕ ನೀಡುವ ಸಸ್ಯಗಳ ಮೇಲಿನ ಅವಲಂಬನೆ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೀಡಲು ಸಜ್ಜಾಗಿದೆ.

ಈ ಕುರಿತು ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ‘ಕೋವಿಡ್ 2ನೇ ಅಲೆ ಇಡೀ ದೇಶವನ್ನೇ ತೀವ್ರವಾಗಿ ಬಾಧಿಸಿದೆ. ಆಮ್ಲಜನಕದ ಬೇಡಿಕೆ ಹಿಂದೆಂದಿಗಿಂತಲೂ ಇಂದು ಅಧಿಕವಾಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರಿಗೆ ಗಿಡಗಳನ್ನು ನೀಡಲು ತೀರ್ಮಾನಿಸಿದ್ದೇವೆ. ಆ ಮೂಲಕ ಗಿಡಮರಗಳ ಅಗತ್ಯ ಮತ್ತು ಅವುಗಳ ಕೊಡುಗೆ ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಇದಾಗಿದೆ’ ಎಂದರು.

ADVERTISEMENT

‘ಈ ಅಭಿಯಾನಕ್ಕೆ ಆಲ, ಅತ್ತಿ, ಬೇವು, ಬಸರಿ, ತಾಪಸಿ, ಹೊನ್ನೆ ಮತ್ತು ಹೊಂಗೆ ಸೇರಿದಂತೆ ಪ್ರಮುಖ ಸಸಿಗಳನ್ನು ನೀಡಲು ಸಿದ್ಧತೆ ನಡೆಸಲಾಗಿದೆ. ಇಲಾಖೆಯ ನರ್ಸರಿಯಲ್ಲಿ ಈ ಗಿಡಗಳು ಸಿದ್ಧವಾಗಿವೆ. ವಿಶ್ವ ಪರಿಸರ ದಿನದಿಂದ ಸೋಂಕಿನಿಂದ ಗುಣಮುಖರಾದವರಿಗೆ ಇದನ್ನು ನೀಡಲಾಗುವುದು. ಆ ಮೂಲಕ ನಾವು ಬಳಸಿದ ಆಮ್ಲಜನಕಕ್ಕೆ ಪ್ರತಿಯಾಗಿ ತಾವೂ ಒಂದು ಗಿಡ ನೆಟ್ಟು ಇತರರಿಗೂ ಮತ್ತು ಮುಂದಿನ ಪೀಳಿಗೆಗೂ ನೈಸರ್ಗಿಕ ಆಮ್ಲಜನಕ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

‘ಈ ಬಾರಿ ವಿಶ್ವ ಪರಿಸರ ದಿನಕ್ಕೆ ‘ಆಮ್ಲಜನಕ ಪಡೆಯಲು ಗಿಡ ಬೆಳೆಸಿ, ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಧ್ಯೇಯವಾಕ್ಯದೊಂದಿಗೆ ಸಸಿ ನೀಡುವ ಅಭಿಯಾನ ಆರಂಭಿಸಲಾಗುವುದು. ಸಾಮಾನ್ಯವಾಗಿ ಒಬ್ಬ ಮನುಷ್ಯ ಒಂದು ದಿನಕ್ಕೆ 3 ಸಿಲಿಂಡರ್‌ ಆಮ್ಲಜನಕ ಬಳಸುತ್ತಾನೆ. ಒಂದು ಸಿಲಿಂಡರ್ ಆಮ್ಲಜನಕಕ್ಕೆ ಈಗಿನ ದರ ₹ 700ರಂತೆ ಒಂದು ದಿನಕ್ಕೆ ₹2,100 ಖರ್ಚಾಗಲಿದೆ. ಹಾಗೆಯೇ ಮರಗಳೇ ಇಲ್ಲದೆ ನಾವು ಕೃತಕ ಆಮ್ಲಜನಕ ಸೇವನೆಯನ್ನೇ ಅವಲಂಬಿಸಿದರೆ ವರ್ಷಕ್ಕೆ ಪ್ರತಿ ವ್ಯಕ್ತಿಗೆ ₹7.66ಲಕ್ಷ ಹಣ ಖರ್ಚಾಗಲಿದೆ ಎಂಬುದನ್ನು ಜನರು ಮನಗಾಣಬೇಕು’ ಎಂದು ಯಶಪಾಲ್ ವಿವರಿಸಿದರು.

‘ಇವೆಲ್ಲವನ್ನು ತಪ್ಪಿಸಬೇಕೆಂದರೆ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು. ತಾವು ನೆಟ್ಟ ಗಿಡದೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಮ್ಮ ಮತ್ತು ಗಿಡದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಅದರ ಬೆಳವಣಿಗೆಯನ್ನು ಕಂಡು ಸಂಭ್ರಮಿಸುವಂತಾಗಬೇಕು. ಪ್ರತಿಯೊಬ್ಬರೂ ಒಂದು ಸಸಿ ನೆಡುವ ಮೂಲಕ ಅರಣ್ಯ ಸಂಪತ್ತು ಹೆಚ್ಚಿಸುವುದರ ಜತೆಗೆ ವಾತಾವರಣದಲ್ಲಿ ಪ್ರಾಣವಾಯುವನ್ನು ಹೆಚ್ಚಿಸಿ ಹಿಂದೆ ಆಗಿರುವ ಲೋಪದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.