ADVERTISEMENT

World Environment Day | ಅರಣ್ಯೀಕರಣ: 34 ಸಾವಿರ ಸಸಿ ನೆಡಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 6:15 IST
Last Updated 5 ಜೂನ್ 2025, 6:15 IST
ನವಲಗುಂದ ನರ್ಸರಿಯಲ್ಲಿ ರೈತರಿಗೆ ವಿತರಿಸಲು ಸಿದ್ದವಾಗಿರುವ ವಿವಿಧ ಬಗೆಯ ಸಸಿಗಳು.
ನವಲಗುಂದ ನರ್ಸರಿಯಲ್ಲಿ ರೈತರಿಗೆ ವಿತರಿಸಲು ಸಿದ್ದವಾಗಿರುವ ವಿವಿಧ ಬಗೆಯ ಸಸಿಗಳು.   

ನವಲಗುಂದ: ತಾಲ್ಲೂಕಿನಲ್ಲಿ ಹಸಿರೀಕರಣ ಹೆಚ್ಚಿಸಲು ಇಲ್ಲಿನ ನವಲಗುಂದ ಗುಡ್ಡದ ನರ್ಸರಿಯಲ್ಲಿ 34 ಸಾವಿರ ಸಸಿಗಳನ್ನು ಬೆಳೆಸಲಾಗಿದ್ದು, ರೈತರಿಗೆ ಹಂಚಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಮುಂಗಾರು ಆರಂಭವಾಗಿದ್ದು, ತಾಲ್ಲೂಕಿನ ವಿವಿಧೆಡೆ ವರುಣ ಕೃಪೆ ತೋರಿದ್ದಾನೆ. ಭೂಮಿ ಹದವಾಗಿದ್ದು, ಸಸಿ ನೆಡಲು ವಾತಾವರಣ ಪ್ರಶಸ್ತವಾಗಿದೆ. ತಾಲ್ಲೂಕನ್ನು ಮತ್ತಷ್ಟು ಹಸಿರಾಗಿ ಕಂಗೊಳಿಸಬೇಕು ಎನ್ನುವ ಉದ್ದೇಶದಿಂದ ಈ ವರ್ಷ ನವಲಗುಂದ ನರ್ಸರಿಯಲ್ಲಿ ವಿವಿಧ ಬಗೆಯ ಸಸಿಗಳನ್ನು ಮುತುವರ್ಜಿ ವಹಿಸಿ ಬೆಳೆಸಲಾಗಿದೆ.

ಸಸಿಗಳನ್ನು ಬೆಳೆಸುವ ಬಗ್ಗೆ ರೈತರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಆಸಕ್ತ ಹೊಂದಿದ ಹಲವು  ರೈತರಿಗೆ ಸಸಿಗಳನ್ನು ವಿತರಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಈಗಾಗಲೇ ಶಲವಡಿ, ಪಡೆಸೂರ, ಇಬ್ರಾಹಿಂಪುರ ಹಾಗೂ ಜಾವೂರ ರಸ್ತೆ ಬದಿಯಲ್ಲಿ ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಅರಣ್ಯ ಇಲಾಖೆ ಆರಂಭಿಸಿದೆ ಎಂದು ವಲಯ ಅರಣ್ಯ ಅಧಿಕಾರಿ ಕಿರಣಕುಮಾರ ಕರತಂಗಿ ಹೇಳಿದರು. 

ADVERTISEMENT

ಸಾರ್ವಜನಿಕವಾಗಿ ಅರಳಿ, ಬಸರಿ ಆಲ, ಅತ್ತಿ, ನೇರಲೆ, ಹೊಂಗೆ, ನಲ್ಲಿ, ಭದ್ರಾಕ್ಷ, ಹೊಳೆಮತ್ತಿ, ಶಿವನಿ, ಸಿಹಿಹುಣಸೆ ಮುಂತಾದ ನಮೂನೆಯ ಸಸಿಗಳನ್ನು ಬೆಳಸಲಾಗಿದ್ದು, ಅನೇಕ ಹೂವಿನ ಸಸಿಗಳನ್ನು ಸಹ ಬೆಳೆಸಲಾಗಿದೆ ಎಂದರು. 

ರೈತರ ಸಸಿಗಳು: ಆರ್.ಕೆ.ವಿ.ವೈ. ಮತ್ತು ಆರ್.ಎಸ್.ಪಿ.ಡಿ ಯೋಜನೆ ಅಡಿ ರೈತರಿಗೆ ವಿತರಿಸಲು 12,500 ಸಸಿಗಳು ಸಿದ್ಧವಾಗಿವೆ. ಮುಖ್ಯವಾಗಿ ಮಹಾಗನಿ, ಕರಬೇವು, ನುಗ್ಗೆ, ಬಿದಿರು, ನೇರಳೆ, ನೆಲ್ಲಿ, ಬೇವು, ಹುಣಸೆ ಮುಂತಾದ ಸಸಿಗಳು ಸಿದ್ದವಾಗಿವೆ. ರೈತರಿಗೆ ಕಡಿಮೆ ದರದಲ್ಲಿ ಈ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ಇದರಲ್ಲಿ 6×9 ಸೈಜಿನ ಸಸಿಗೆ ₹3  ಮತ್ತು 8×12 ಸೈಜಿನ ಒಂದು ಸಸಿಗೆ ₹6 ದರ ನಿಗದಿಪಡಿಸಲಾಗಿದೆ. ರೈತರು ಅಥವಾ ಆಸಕ್ತ ಸಾರ್ವಜನಿಕರು ಈಗ ಈ  ಸಸಿಗಳನ್ನು  ಇಲಾಖೆಯಿಂದ ಪಡೆದುಕೊಳ್ಳಬಹುದಾಗಿದೆ.

ಸಸಿಗಳಿಗಾಗಿ ಭರಮಪ್ಪ ಸರವಾರಿ ( 8105182705) ಸಂಪರ್ಕಿಸಬಹುದು ಎಂದು ತಿಳಿಸಿದರು. 

‘ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ನವಲಗುಂದದ ಸಾಮಾಜಿಕ ಅರಣ್ಯ ವಲಯದ ಸಂಯುಕ್ತ ಆಶ್ರಯದಲ್ಲಿ ಎಲ್ಲ ಸರ್ಕಾರಿ ಶಾಲೆ ಕಾಲೇಜು ಮತ್ತು ಕಚೇರಿಗಳಿಗೆ ಮೊದಲನೇ ಹಂತವಾಗಿ ತಲಾ ಒಂದೊಂದು ಸಸಿಯನ್ನು ವಿತರಿಸಲಾಗುವುದು.
–ವಿ.ಡಿ ರಂಗಣ್ಣವರ, ತಾಲ್ಲೂಕು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನವಲಗುಂದ
‘ನವಲಗುಂದ ನರ್ಸರಿಯಲ್ಲಿ ಈ ವರ್ಷ 34000 ಸಸಿಗಳನ್ನು ಬೆಳಸಲಾಗಿದೆ. ಇದರಲ್ಲಿ 12500 ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುವುದು. ರೈತರು ತಮ್ಮ ಹೊಲಗಳ ಬದುವುಗಳಲ್ಲಿ ನೆಡಲು ಮುಂದಾಗಬೇಕು. ಉಳಿದ ಸಸಿಗಳನ್ನು ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ನೆಡುವ ವ್ಯವಸ್ಥೆ ಮಾಡಲಾಗಿದೆ.
–ಕಿರಣಕುಮಾರ ಕರತಂಗಿ, ವಲಯ ಅರಣ್ಯ ಅಧಿಕಾರಿಗಳು ಸಾಮಾಜಿಕ ಅರಣ್ಯ ವಲಯ ನವಲಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.