ADVERTISEMENT

ಪ್ರಕೃತಿ ವಿಕೃತಿ; ಮನುಕುಲ ನಾಶಕ್ಕೆ ನಾಂದಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ

ರಾಜು ಭೂಶೆಟ್ಟಿ
Published 26 ಜುಲೈ 2019, 13:34 IST
Last Updated 26 ಜುಲೈ 2019, 13:34 IST
ಪ್ರಕೃತಿ ಸಂರಕ್ಷಣೆ ದಿನ
ಪ್ರಕೃತಿ ಸಂರಕ್ಷಣೆ ದಿನ   

ಮನುಷ್ಯನು ಬದುಕುಳಿಯಲು ಪ್ರಕೃತಿಯಲ್ಲಿ ದೊರೆಯುವ ನೀರು, ಗಾಳಿ, ಮಣ್ಣು, ಖನಿಜಗಳು, ಗಿಡ ಮರಗಳು, ಪ್ರಾಣಿಗಳು, ಆಹಾರ, ಅನಿಲ ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ. ಒಂದು ವೇಳೆ ಈ ಸಂಪನ್ಮೂಲಗಳಲ್ಲಿ ಯಾವುದಾದರೊಂದು ಕೊರತೆಯಾದರೂ ಮನುಷ್ಯನ ಬದುಕು ದುಸ್ತರವಾಗುತ್ತದೆಹಾಗೂ ಅಂತಹ ಬದುಕನ್ನು ಕಲ್ಪಿಸುವುದು ಸಹ ಭಯಾನಕವೆಂದೇ ಹೇಳಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ತೀವ್ರವಾದ ಜನಸಂಖ್ಯೆ ಏರಿಕೆಯಿಂದಾಗಿ ಹಾಗೂ ಅವಿವೇಕದಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುತ್ತಿರುವುದರಿಂದ ಪ್ರಕೃತಿಯ ಮೇಲೆ ತೀವ್ರವಾದ ಒತ್ತಡ ಉಂಟಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಭೂಮಿ ಬರಡಾಗುವ ಭಯಾನಕ ದಿನಗಳೇನೂ ದೂರವಿಲ್ಲವೆಂದು ಹೇಳಬಹುದಾಗಿದೆ. ಆದ್ದರಿಂದ ಇಂತಹ ಜ್ವಲಂತ ಸಮಸ್ಯೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 28ಅನ್ನು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.

1970ರಿಂದ ಮಾನವನ ಅಹಿತಕರ ಚಟುವಟಿಕೆಗಳ ಮೂಲಕ ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಎರಡು ಪಟ್ಟು ಹೆಚ್ಚಾಗಿದ್ದು, ಮಾನವ ಯಾವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅತಿಯಾಗಿ ಅವಲಂಬಿತನಾಗಿದ್ದನೋ, ಆ ಸಂಪನ್ಮೂಲಗಳು ಅಂದಿನಿಂದ ಇಲ್ಲಿಯವರೆಗೆ ಶೇ 33ರಷ್ಟು ಕ್ಷೀಣಿಸುತ್ತ ಸಾಗುತ್ತಿವೆ. ಕೆಲವು ನೈಸರ್ಗಿಕ ಸಂಪನ್ಮೂಲಗಳು, ಪ್ರಕೃತಿಯ ಮಡಿಲಿಗೆ ಸುಲಭವಾಗಿ ಮರಳಿ ಬರುತ್ತವೆ. ಅವುಗಳನ್ನು ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. ಅವುಗಳೆಂದರೆ ಸೌರಶಕ್ತಿ, ಗಾಳಿ, ನೀರು, ಅರಣ್ಯಗಳು, ಕೃಷಿ ಬೆಳೆಗಳು ಮುಂತಾದವುಗಳು.

ADVERTISEMENT

ಕೆಲವು ನೈಸರ್ಗಿಕ ಸಂಪನ್ಮೂಲಗಳು ಭೂಮಿಯ ಅಂತರಾಳದಲ್ಲಿ ಬಿಲಿಯನ್ ಗಟ್ಟಲೆ ವರ್ಷಗಳ ಹಿಂದೆ ಉಂಟಾಗಿವೆ. ಉದಾಹರಣೆಗೆ ಪಳೆಯುಳಿಕೆ ಇಂಧನಗಳು ಮತ್ತು ಖನಿಜಗಳು. ಅಂತಹ ಸಂಪನ್ಮೂಲಗಳು ಉಂಟಾಗುತ್ತಿರುವ ವೇಗವು, ಅವುಗಳನ್ನು ಮಾನವರು ಬಳಸುತ್ತಿರುವ ವೇಗಕ್ಕಿಂತ ಕಡಿಮೆ ಇದೆ. ಹೀಗಾಗಿ ಪ್ರಮಾಣ ಕಡಿಮೆಯಾಗುವ ಇಂಥ ಸಂಪನ್ಮೂಲಗಳನ್ನು ಮತ್ತೆ ಕೂಡಲೇ ಪಡೆಯುವುದು ಸಾಧ್ಯವಿಲ್ಲ. ಅಂದರೆ ಒಮ್ಮೆ ಕ್ಷೀಣಿಸಿ, ಪುನರ್‌ಭರ್ತಿ ಮಾಡಲಾಗದ ಇಂಥ ಸಂಪನ್ಮೂಲಗಳನ್ನು ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು.

ನಮ್ಮ ಬೇಕು ಬೇಡಿಕೆಗಳನ್ನು ಪೂರೈಸುವ ಈ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಪರಿಸರದಿಂದಲೇ ಪಡೆದುಕೊಳ್ಳುವುದರಿಂದ ಇವುಗಳ ಉಳಿವಿಗಾಗಿ ಪ್ರಕೃತಿ/ಪರಿಸರವನ್ನು ರಕ್ಷಿಸಲು ಪ್ರತಿಯೊಬ್ಬರು, ಪ್ರತಿ ಕ್ಷಣವೂ ಆಲೋಚಿಸಬೇಕಾದ ತುರ್ತು ಅಗತ್ಯತೆ ಇದೆ.

ಪರಿಸರ ರಕ್ಷಣೆಗಾಗಿ ಐದು ಆರ್‌(R)ಗಳನ್ನು ಅನುಸರಿಸಬೇಕಾಗಿದೆ. ಅವುಗಳೆಂದರೆ...

1) ನಿರಾಕರಣೆ (REFUSE): ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಜನರು ಕೊಡಲು ಬಂದಾಗ ಬೇಡವೆಂದು ಹೇಳುವುದು. ನಿಮಗೆ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವ ವಸ್ತುಗಳನ್ನು ಕೊಂಡುಕೊಳ್ಳುವುದನ್ನು ನಿರಾಕರಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು. ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಚೀಲಗಳನ್ನು ತಿರಸ್ಕರಿಸುವುದು.

2) ಮಿತಬಳಕೆ (REDUCE): ಆಹಾರ ವ್ಯರ್ಥವಾಗದಂತೆ ಕಾಳಜಿ ವಹಿಸುವುದು. ಸೋರುತ್ತಿರುವ ನಲ್ಲಿಗಳನ್ನು ದುರಸ್ತಿ ಮಾಡಿಸುವುದು. ದೀಪ, ಫ್ಯಾನ್‌ಗಳ ಅನವಶ್ಯಕವಾಗಿ ಉರಿಸುವುದನ್ನು ನಿಲ್ಲಿಸುವುದು. ಶಕ್ತಿ ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಆದ್ಯತೆ ನೀಡಬೇಕು.

3) ಮರುಬಳಕೆ (REUSE): ಬಳಸಿದ ವಸ್ತುಗಳನ್ನೇ ಮತ್ತೆ ಮತ್ತೆ ಬಳಸುವುದು. ಉದಾ: ಬಳಸಿದ ಲಕೋಟೆಗಳನ್ನು ಎಸೆಯುವುದರ ಬದಲು ಅದನ್ನು ತಿರುಗಿಸಿ ಮತ್ತೆ ಪುನಃ ಬಳಸುವುದು. ಜಾಮ್ ಅಥವಾ ಉಪ್ಪಿನಕಾಯಿಯಂತಹ ವಸ್ತುಗಳನ್ನು ತುಂಬಿರುವ ಬಾಟಲಿಗಳನ್ನು ಅಡುಗೆ ಮನೆಯಲ್ಲಿ ಇತರೆ ವಸ್ತುಗಳನ್ನು ತುಂಬಿಡಲು ಬಳಸಬಹುದಾಗಿದೆ.

4) ಮರು ಉದ್ದೇಶ (REPURPOSE): ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಎಚ್ಚರಿಕೆಯಿಂದ ಯೋಚಿಸಿ ಅದನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಹುದು. ಉದಾ- ಖಾಲಿಯಾದ ಚಾಕ್ ಡಬ್ಬವನ್ನು, ಅದರಲ್ಲಿ ಚಿಕ್ಕ ಚಿಕ್ಕ ರಂಧ್ರಗಳನ್ನು ಕೊರೆದು ಟೆಸ್ಟ್‌ಟ್ಯೂಬ್ ಸ್ಟ್ಯಾಂಡ್ ಆಗಿ ಬಳಸಿಕೊಳ್ಳಬಹುದು. ಬಿರುಕು ಬಿಟ್ಟ ಮಣ್ಣಿನ ಪಾತ್ರೆಗಳನ್ನು ಸಣ್ಣ ಸಸ್ಯಗಳನ್ನು ಬೆಳೆಸಲು ಬಳಸಬಹುದು.

5) ಮರುಚಕ್ರೀಕರಣ(RECYCLE): ಉಪಯೋಗಿಸಿದ ಪ್ಲಾಸ್ಟಿಕ್, ಕಾಗದ, ಗಾಜು, ಲೋಹಗಳನ್ನು ಸಂಗ್ರಹಿಸಿ ಮರುಚಕ್ರೀಕರಣ ಮಾಡಿ ಮತ್ತೆ ಅಗತ್ಯ ವಸ್ತುಗಳನ್ನು ತಯಾರಿಸಬಹುದು. ಮರುಬಳಕೆ ಮಾಡುವ ಮೊದಲು ನಾವು ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಬೇಕು. ಆದ್ದರಿಂದ ಮರುಚಕ್ರೀಕರಣ ಮಾಡಬಹುದಾದ ವಸ್ತುಗಳನ್ನು ಇತರ ತ್ಯಾಜ್ಯ ವಸ್ತುಗಳ ಜೊತೆಗೆ ರಾಶಿ ಹಾಕಬಾರದು.

ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯು ಭವಿಷ್ಯದ ಪೀಳಿಗೆಗಳ ಮೂಲ ಅಗತ್ಯಗಳನ್ನು ಪೂರೈಸಲು ಸಂಪನ್ಮೂಲಗಳನ್ನು ಸಂರಕ್ಷಿಸುತ್ತಲೇ ಮಾನವನ ಪ್ರಸ್ತುತ ಮೂಲಭೂತ ಅಗತ್ಯಗಳನ್ನು ಪೂರೈಸುವ ವಿಧಾನಗಳನ್ನು ಪೂರೈಸುವ ವಿಧಾನಗಳನ್ನು ಪ್ರೋತ್ಸಾಹಿಸುತ್ತದೆ. ಆರ್ಥಿಕ ಅಭಿವೃದ್ಧಿಯು ಪರಿಸರ ಸಂರಕ್ಷಣೆಯೊಂದಿಗೆ ಜೋಡಣೆಗೊಂಡಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಅಗತ್ಯವೇನಿದೆ? ಜಗತ್ತಿನಾದ್ಯಂತ ಜನಸಂಖ್ಯೆಯು ತೀವ್ರವಾಗಿ ಬೆಳೆಯುತ್ತಿರುವುದರಿಂದ ನೈಸರ್ಗಿಕ ಸಂಪನ್ಮೂಲಗಳ ಬೇಡಿಕೆಯೂ ಹೆಚ್ಚುತ್ತಿರುವುದರಿಂದ, ಬೇಡಿಕೆ ಪೂರೈಸಿಕೊಳ್ಳಲು ತೀವ್ರವಾದ ಮಾನವನ ಹಸ್ತಕ್ಷೇಪದಿಂದ ಪರಿಸರದ ನಾಶ ಉಂಟಾಗುತ್ತಿದೆ. ಪರಿಸ್ಥಿತಿ ಇದೇ ವೇಗದಲ್ಲಿ ಮುಂದುವರೆದರೆ ಕೆಲವೇ ಕೆಲವು ವರ್ಷಗಳಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವ ಭೀತಿ ಎದುರಾಗಿದೆ. ಪಳೆಯುಳಿಕೆ ಇಂಧನಗಳು ಬೇಕೆಂದಾಗ ತಕ್ಷಣ ರೂಪುಗೊಳ್ಳುವಂತಹುಗಳಲ್ಲ. ಅವುಗಳು ರೂಪುಗೊಳ್ಳಲು ಮಿಲಿಯನ್‌ಗಟ್ಟಲೇ ವರ್ಷಗಳೇ ಬೇಕಾಗುತ್ತವೆ.

ಅಪಾಯಕಾರಿ ಕೊಳ್ಳುಬಾಕುತನ ಸಂಸ್ಕೃತಿ-ತನಗೆ ಅವಶ್ಯಕತೆ ಇರುವುದಕ್ಕಿಂತಲೂ ಹೆಚ್ಚು-ಹೆಚ್ಚಾಗಿ ವಸ್ತುಗಳನ್ನು ಕೊಳ್ಳುತ್ತಿರುವುದು ಪರಿಸರಕ್ಕೆ ಕೊಟ್ಟ ದೊಡ್ಡ ಕೊಡಲಿ ಪೆಟ್ಟಾಗಿದೆ. ಇಂದಿನ ಆಧುನಿಕ ಸಮಾಜದಲ್ಲಿ ಮನುಷ್ಯ ವಸ್ತುಗಳನ್ನು ಅತೀಯಾಗಿ ಪ್ರೀತಿಸುತ್ತಿದ್ದಾನೆಯೇ ಹೊರತು ಜೀವಿಗಳನ್ನಲ್ಲ. ವಸ್ತುಗಳನ್ನು ಬಳಸಬೇಕು, ಆದರೆ ಜೀವಿಗಳನ್ನು ಪ್ರೀತಿಸಬೇಕು. ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಮಣ್ಣು, ಗಾಳಿ ತೀವ್ರ ಮಾಲಿನ್ಯವಾಗಿದ್ದು, ಕಾಡಿನ ತೀವ್ರ ನಾಶ, ನದಿ ಮತ್ತು ನೀರಿನ ಮೂಲಗಳ ತೀವ್ರ ಮಾಲಿನ್ಯವಾಗಿದೆ. ಆಕರ್ಷಕ ಜಾಹೀರಾತುಗಳಿಂದಲೂ ಕೊಳ್ಳು ಬಾಕುತನ ಹೆಚ್ಚಲು ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮಿತಿ ಮೀರಿ ಬಳಸಲ್ಪಡುತ್ತಿದ್ದು, ಈ ಎಲ್ಲದರ ದುಷ್ಪರಿಣಾಮಗಳು ಮುಂದೊಂದು ದಿನ ಮನುಷ್ಯನ ಅಸ್ತಿತ್ವವನ್ನೇ ಅಲ್ಲಾಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.