ADVERTISEMENT

ಹೆಣ್ಣುಮಕ್ಕಳ ವಿಷಯದಲ್ಲಿ ತಪ್ಪು ಹೆಜ್ಜೆ; ಆತ್ಮಹತ್ಯೆ: ದಯಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 9:01 IST
Last Updated 25 ಅಕ್ಟೋಬರ್ 2022, 9:01 IST

ಹುಬ್ಬಳ್ಳಿ: 'ಮಠಾಧೀಶರಿಗೂ ಕೆಲವಷ್ಟು ನೀತಿ ಸಂಹಿತೆಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲವರು ಮಹಿಳೆಯರ ವಿಷಯದಲ್ಲಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅವರು ಆತ್ಮಸಾಕ್ಷಾತ್ಕಾರ ಪಡೆದಿಲ್ಲ ಎಂದರ್ಥ' ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

'ಹೆಣ್ಣುಮಕ್ಕಳ ವಿಷಯದಲ್ಲಿ ಹೋರಾಡಲು ಆಗದು ಎಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸ್ವಾಮೀಜಿಯಾದರೂ ತಪ್ಪು ಮಾಡಿದ್ದರೆ ಕಾನೂನು ಕ್ರಮಕ್ಕೆ ಒಳಪಡಲೇಬೇಕು. ಕೆಲವರು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಾರೆ. ಅದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ' ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಮೋಕ್ಷ ಸಾಧನೆ ಹಾಗೂ ಸಮಾಜದ ಒಳಿತಿಗಾಗಿ ಮಠಾಧೀಶರು ಶ್ರಮಿಸಬೇಕು. ಆದರೆ, ಇತ್ತೀಚೆಗೆ ಕೆಲವರು ಜನಪ್ರತಿನಿಧಿಗಳಿಗೆ ಜೈಕಾರ ಹಾಕುವುದು, ಅವರ ಹಿಂದೆ ಓಡಾಡುವುದು, ಅನುದಾನಕ್ಕಾಗಿ ಕೈಚಾಚುವುದು ಮಾಡುತ್ತಿದ್ದಾರೆ. ಆಸ್ತಿಗಾಗಿ, ಐಷಾರಾಮಿ ಬದುಕಿಗಾಗಿ ಮಠದ ಪೀಠಾಧಿಪತಿಗಳಾಗುತ್ತಿದ್ದಾರೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಬಡೆದಾಡುತ್ತಿದ್ದಾರೆ. ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಧರ್ಮ ಮತ್ತು ಕ್ಷಾತ್ರ ತೇಜಸ್ಸು ಹಾಳಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

'ದೇಶದ ಎಲ್ಲ ಸ್ವಾಮೀಜಿಗಳು ಒಂದಾಗಿ ವಿಶ್ವಧರ್ಮ ಸಂಸತ್ ರಚನೆ ಮಾಡಬೇಕು. ಅಲ್ಲಿ ಸಮಾಜದ ಒಳಿತಿಗೆ ಏನು ಮಾಡಬಹುದು ಎನ್ನುವ ಕುರಿತು ಚರ್ಚೆ ನಡೆಸಬೇಕು' ಎಂದು ಅಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.