ADVERTISEMENT

ವಿದೇಶಿ ಮಹಿಳೆಗೆ ಮರುಳಾಗಿ ₹ 35 ಲಕ್ಷ ನಷ್ಟ!

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 20:33 IST
Last Updated 23 ಜೂನ್ 2022, 20:33 IST
.
.   

ಬೆಂಗಳೂರು: ಫೇಸ್‌ಬುಕ್‌ ಮೂಲಕ ಪರಿಚಯವಾದ ವಿದೇಶಿ ಮಹಿಳೆಯ ಮಾತಿನ ಮೋಡಿ ಮತ್ತು ಅಂದಕ್ಕೆ ಮರುಳಾಗಿ ಖಾಸಗಿ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕರೊಬ್ಬರು ₹ 35 ಲಕ್ಷ ಕಳೆದುಕೊಂಡಿದ್ದಾರೆ!

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ, ‘ಖಾಸಗಿ ಫೈನಾನ್ಸ್‌ನಲ್ಲಿ ವ್ಯವಸ್ಥಾಪಕರಾಗಿದ್ದ ನಗರದ 48 ವರ್ಷದ ವ್ಯಕ್ತಿಯೊಬ್ಬರಿಗೆ ಫೇಸ್‍ಬುಕ್ ಮೂಲಕ ವಿದೇಶಿ ಮಹಿಳೆಯೊಬ್ಬಳು ಪರಿಚಯವಾಗಿದ್ದಳು. ಆಕೆ ತನ್ನ ಹೆಸರು ನ್ಯಾನ್ಸಿ ವಿಲಿಯಂ. ತಾನು ಇಂಗ್ಲೆಂಡಿನವಳು ಎಂದು ಹೇಳಿಕೊಂಡು ಗೆಳೆತನ ಬೆಳೆಸಿದ್ದಳು’ ಎಂದರು.

‘ಬಳಿಕ ಪರಸ್ಪರ ಇಬ್ಬರೂ ಮೊಬೈಲ್‌ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸ್‌ಆ್ಯಪ್‌ ಚಾಟಿಂಗ್ ಮಾಡಿದ್ದಾರೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ, ಇಬ್ಬರೂ ಸೇರಿ ವ್ಯವಹಾರ ಆರಂಭಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ವ್ಯವಹಾರದಲ್ಲಿ ತೊಡಗುತ್ತೇನೆ ಎಂದು ನ್ಯಾನ್ಸಿ ನಂಬಿಸಿದ್ದಾಳೆ. ಅದಕ್ಕೆ ಹಣ ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದಾಳೆ.’

ADVERTISEMENT

‘ಶೀಘ್ರದಲ್ಲಿಯೇ ಭಾರತಕ್ಕೆ ಬರುತ್ತೇನೆ. ಬೆಂಗಳೂರಿನಲ್ಲಿ ಜ್ಯುವೆಲ್ಲರಿ ವ್ಯವಹಾರ ಆರಂಭಿಸೋಣ ಎಂದು ನಂಬಿಕೆ ಹುಟ್ಟಿಸಿದ ನ್ಯಾನ್ಸಿ, ವ್ಯಕ್ತಿಯಿಂದ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ₹ 35 ಲಕ್ಷ ಹಾಕಿಸಿಕೊಂಡಿದ್ದಾಳೆ. ಹಣ ಖಾತೆಗೆ ಜಮೆ ಆಗುತ್ತಿದ್ದಂತೆ ಫೇಸ್‌ಬುಕ್ ಖಾತೆ ಡಿಲೀಟ್ ಮಾಡಿ ಆಕೆ ನಾಪತ್ತೆಯಾಗಿದ್ದಾಳೆ.
ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಆ ವ್ಯಕ್ತಿ ದೂರು ನೀಡಿದ್ದಾರೆ. ಪೂರ್ವ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.