ADVERTISEMENT

ಅಂಗವೈಕಲ್ಯದ ಜೊತೆಗೆ ಅಂದಪ್ಪನ ವಿಶ್ವಾಸ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:21 IST
Last Updated 2 ಡಿಸೆಂಬರ್ 2013, 8:21 IST

ಗಜೇಂದ್ರಗಡ: ಮನಸೊಂದಿದ್ದರೆ ಸಾಧನೆ ಮಾಡಲು ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ  ನಗರದ ಜನತಾ ಫ್ಯ್ಲಾಟ್‌ನ 23 ವರ್ಷ ವಯಸ್ಸಿನ ಅಂಗವಿಕಲ ಅಂದಪ್ಪ ಗಿಡ್ಡಪ್ಪ ಗುಡೂರ ಅವರ ವಿಶಿಷ್ಟ ವ್ಯಕ್ತಿತ್ವವೇ ಸಾಕ್ಷಿ.

ಅಂಗವೈಕಲ್ಯವಿದ್ದರೂ ಇನ್ನೊಬ್ಬರ ಮೇಲೆ ಅವಲಂಬಿತರಾಗದ ಅಂದಪ್ಪ ಮಾತ್ರ ದಿನದ ಹದಿನಾಲ್ಕು ಗಂಟೆಗಳ   ದುಡಿದು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ. ಹುಟ್ಟಿ­ನಿಂದಲೇ ಎರಡು ಕಾಲುಗಳ ಸ್ವಾಧೀನ ಕಳೆದು­ಕೊಂಡ ಅಂದಪ್ಪನಿಗೆ ವೈಕಲ್ಯದಿಂದ ಮುಕ್ತಿ ಕೊಡಿಸಲು ಪಾಲಕರು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದವು. ಕಟ್ಟಡ ನಿರ್ಮಾಣ ಕಾರ್ಯದ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಅಂದಪ್ಪನ ಪಾಲಕರಿಗೆ ದುಬಾರಿ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿ­ಸುವ ಸಾಮರ್ಥ ಇಲ್ಲದ ಕಾರಣ ಅಂಗವೈಕಲ್ಯತೆ ನಿವಾರಣೆಯಾಗಲಿಲ್ಲ. ಪರಿಣಾಮ ಅನಿವಾರ್ಯವಾಗಿ ವೈಕಲ್ಯದೊಂದಿಗೆ ಬದುಕು ಕಳೆಯುವಂತಾಯಿತು.

ಅಂದಪ್ಪ ಓಣಿಯಲ್ಲಿ ನಡೆಯುತ್ತಿದ್ದ ಜಲ್ಲಿಕಲ್ಲು ತಯಾರಿಕೆಯಿಂದ ಪ್ರೇರೇಪಿತನಾಗಿ ಜಲ್ಲಿಕಲ್ಲು ಒಡೆಯುವ ಕಾರ್ಯದಲ್ಲಿ ತಮ್ಮನ್ನು
ತೊಡಗಿ­ಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ವಾರಿಕಲ್‌ ಗ್ರಾಮದಲ್ಲಿ ದೊರೆಯುವ ಚಿಂಚ್‌ಕಲ್ಲನ್ನು ಟ್ರ್ಯಾಕ್ಟರ್ ಒಂದಕ್ಕೆ   ₨ 2,000 ನೀಡಿ ಕಲ್ಲುಗಳನ್ನು ಖರೀದಿಸಿ ಗಜೇಂದ್ರಗಡಕ್ಕೆ ತರಿಸಿ­ಕೊಳ್ಳುತ್ತಾರೆ. ಹೀಗೆ ತರಿಸಲಾದ ಚಿಂಚ್‌ಕಲ್ಲುಗಳು ದೊಡ್ಡ ಗಾತ್ರದಲ್ಲಿರುತ್ತದೆ. ಅವುಗಳನ್ನು 40 ಎಂ.ಎಂ. ಮತ್ತು 20 ಎಂ.ಎಂ. ಗ್ರಾತ್ರಕ್ಕೆ ಪರಿವರ್ತಿಸಲಾಗುತ್ತದೆ. ಹೀಗೆ ಒಂದು ಟ್ರ್ಯಾಕ್ಟರ್‌ ಖಡಿಗಳನ್ನು ಸುತ್ತಿಗೆಯಿಂದ ಒಡೆದು ವಿವಿಧ ಗಾತ್ರಗಳಿಗೆ ಪರಿವರ್ತಿಸಲು ಕನಿಷ್ಠ ಏಳು ದಿನಗಳುಬೇಕು.  ಜಲ್ಲಿಕಲ್ಲನ್ನು ಟ್ರ್ಯಾಕ್ಟರ್‌ಗೆ ₨ 2,400 ದರದಂತೆ ಮಾರಾಟ ಮಾಡಲಾ­ಗುತ್ತದೆ. ಬೆಳಗ್ಗೆಯಿಂದ ಸಂಜೆ ವರೆಗೂ ಸುತ್ತಿಗೆಯಿಂದ ಕಲ್ಲುಗಳನ್ನು ಒಡೆಯುವ ಸದ್ದಿಗೆ ಕವಿಗಳ ಶ್ರವಣ ಶಕ್ತಿ ಕುಗ್ಗಿದೆ.

ಜಲ್ಲಿಕಲ್ಲು ತಯಾರಿಸದಿದ್ದರೆ ಸರ್ಕಾರ ನೀಡುವ ಮಾಸಿಕ ವೇತನದಿಂದ ಎರಡು ದಿನವೂ ಹೊಟ್ಟೆ ತುಂಬುವುದಿಲ್ಲ. ಮನೆಯ ಸಮಸ್ಯೆಗಳ ಮುಂದೆ ತಮ್ಮ ಅಂಗವೈಕಲ್ಯ ದೊಡ್ಡಸಮಸ್ಯೆ­ಯಾಗಿಲ್ಲ. ಎದೆಗಾರಿಕೆಯಿಂದ ಅಂಗವೈಕಲ್ಯವನ್ನು ಮೀರಿ ಮುನ್ನಡೆಯುತ್ತಿದ್ದಾರೆ.

ಕಣ್ಣು ಮತ್ತು ಕಿವಿಯಲ್ಲಿನ ಹುಳು, ಹರಳುಗಳನ್ನು ತೆಗೆಯುವ  ಕಲೆಯನ್ನು ಅಂದಪ್ಪ ಕರಗತ ಮಾಡಿಕೊಂಡಿದ್ದಾರೆ. ಓಣಿಯ ಯಲ್ಲಪ್ಪ ಗೊಂದಳೆ ಎಂಬುವವರಿಂದ ಈ ಕಲೆ ಕಲಿತಿದ್ದಾರೆ. ಬಾಲ್ಯದಲ್ಲಿ ಯಲ್ಲಪ್ಪ ಅವರು ಜನರ ಕಣ್ಣು ಮತ್ತು ಕಿವಿಗಳಲ್ಲಿನ ಹುಳು ಹಾಗು ಹರಳುಗಳನ್ನು ತೆರವುಗೊಳಿಸುತ್ತಿದ್ದ ಪರಿಯನ್ನು ನೋಡುತ್ತಾ ಬೆಳೆದ ಅಂದಪ್ಪ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಜನರು ಕಣ್ಣು ಮತ್ತು ಕಿವಿಯಲ್ಲಿನ ಹುಳು, ಹರಳುಗಳ್ನು ತೆರವುಗೊಳಿಸುವಂತೆ ಬರುತ್ತಾರೆ. ಜನರ ಸಮಸ್ಯೆಯನ್ನು ಯಾವುದೇ ಸಾಧನ ಬಳಸದೆ ಸರಿ ಪಡಿಸುತ್ತಾನೆ. ನಿತ್ಯ ಈ ಕಲೆಯಿಂದ ₨ 200 ರಿಂದ 300 ರೂಪಾಯಿ ಸಂಪಾದಿಸುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.