ADVERTISEMENT

ಅಡವ್ಯಾಗ ಹಸರ ಇಲ್ಲ... ಕುಡಿಯಾಕ ನೀರಿಲ್ಲ...

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 6:15 IST
Last Updated 21 ಜುಲೈ 2012, 6:15 IST
ಅಡವ್ಯಾಗ ಹಸರ ಇಲ್ಲ... ಕುಡಿಯಾಕ ನೀರಿಲ್ಲ...
ಅಡವ್ಯಾಗ ಹಸರ ಇಲ್ಲ... ಕುಡಿಯಾಕ ನೀರಿಲ್ಲ...   

ಲಕ್ಷ್ಮೇಶ್ವರ: `ಅಡವ್ಯಾಗ ಎಲ್ಲೇ ಹುಡುಕಿದ್ರೂ ಹಸರ ಕಾಣವಲ್ದು, ಕುರಿ ಮತ್ತ ಆಡುಗಳಿಗೆ ಕುಡ್ಯಾಕ ನೀರ ಸಿಗವಲ್ದು... ಹಿಂಗಾದ್ರ ನಾವು ಕುರಿ ಸಾಕದ ಹ್ಯಾಂಗ್ರೀ...? ಎಂಬ ಪ್ರಶ್ನೆ ಈಗ ಕುರಿಗಾರರನ್ನು ಕಾಡುತ್ತಿದೆ.
ಹೌದು, ಇದು ಮುಂಗಾರು ಮಳೆ ಆಗದೇ ಇರುವುದರ ಘೋರ ಪರಿಣಾಮ. ಕಳೆದ ವರ್ಷದ ಭೀಕರ ಬರದ ಹೊಡೆತದಿಂದ ಪಾರಾಗುವ ಮುನ್ನವೇ ಮತ್ತೆ ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆ ಮುನಿಸಿಕೊಂಡಿದ್ದು ರೈತರನ್ನು, ಹೈನುಗಾರಿಕೆ ನೆಚ್ಚಿದವರನ್ನು, ಕುರಿಗಾರರನ್ನು ಹೈರಾಣಾಗಿಸಿದೆ.

ಹಿಂದಿನ ವರ್ಷದ ಬರಗಾಲದ ಭೀಕರತೆಯಿಂದ ತತ್ತರಿಸಿರುವ ರೈತರು ಮತ್ತೆ ಮ ೆರಾಯನ ಸಿಟ್ಟಿನಿಂದ ನಿಜಕ್ಕೂ ಕಂಗಾಲಾಗಿದ್ದಾರೆ. ಮಳೆರಾಯನ ಕೋಪ ಕೇವಲ ಬೆಳೆಗಳ ಮೇಲಷ್ಟೆ ಆಗದೆ, ಜಾನುವಾರುಗಳ ಹೊಟ್ಟು, ಸೊಪ್ಪಿ, ಮೇವಿನ ಉತ್ಪಾದನೆ ಮೇಲೂ ಭಾರೀ ಪೆಟ್ಟು ಕೊಟ್ಟಿದೆ. ದನಕರುಗಳಿಗೆ ಹೊಟ್ಟು-ಮೇವು ಎಲ್ಲಿಂದ ತರುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಪಶು ವೈದ್ಯಕೀಯ ಇಲಾಖೆ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 1ಲಕ್ಷ 15 ಸಾವಿರ ಕುರಿ, 37,000 ಆಡು, 33,066 ಎತ್ತು-ಆಕಳು ಹಾಗೂ 11,000 ಎಮ್ಮೆಗಳನ್ನು ಸಾಕ ಲಾಗುತ್ತಿದೆ.  ತಾಲ್ಲೂಕಿನಲ್ಲಿ ಬಹಳಷ್ಟು ಕುರುಬರು ಕುರಿ ಸಾಕಾಣಿಕೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಈ ವರ್ಷ ಮಳೆ ಇಲ್ಲದ್ದರಿಂದ ಅಡವಿಯಲ್ಲಿ ಹಿಡಿ ಹುಲ್ಲು ಹುಟ್ಟಿಲ್ಲ. ಹೀಗಾಗಿ ಕುರಿಗಾರರು ತಮ್ಮ ಕುರಿ ಮತ್ತು ಆಡುಗಳ ಆಹಾರಕ್ಕಾಗಿ ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

`ಬರಗಾಲ ಬಂದಾಗ ಸರ್ಕಾರದವರು ಗೋ-ಸಾಲಿ ತಗೀತಾರ. ಆದ್ರ ಕುರಿಗಾರರ ಸಲುವಾಗಿ ಏನೂ ಮಾಡಂಗಿಲ್ಲ. ಈಗ ನೋಡಿದ್ರ ಹೊಲದಾಗ ಮೇವಿಲ್ಲ. ಅಡವ್ಯಾಗ ಹುಲ್ಲಿಲ್ಲ. ಅಷ್ಟಯಾಕ ಕುರಿ ಕುಡ್ಯಾಕ ನೀರೂ ಇಲ್ಲ. ಹೊಲದಾಗಿನ ಸಣ್ಣ ಸಣ್ಣ ಕೆರಿ ಬತ್ತಿ ಹೋಗ್ಯಾವು. ಹಿಂಗಾಗಿ ಕುರಿಗೆ ನೀರ ಹುಡಕೊಂಡ ಮೈಲಗಟ್ಟಲೆ ಅಲೀಬೇಕಾಗೈತಿ. ಈಗಂತೂ ಕುರಿ ಸಾಕೂದ ನಮ್ಗ ಬ್ಯಾಸರ ಆಗೈತಿ~ ಎಂದು ಸೂರಣಗಿ ಗ್ರಾಮದ ಯುವ ಕುರಿಗಾರ ದ್ಯಾವಪ್ಪ ತನ್ನ ನೋವು ತೋಡಿಕೊಳ್ಳುತ್ತಾನೆ.

ಮುಂಗಾರು ಕೈಕೊಟ್ಟಿದ್ದರಿಂದ ಯಾವ ಹೊಲದಲ್ಲೂ ಒಂದು ಚೂರು ಹಸಿರು ಬೆಳೆದಿಲ್ಲ. ಅಲ್ಲದೆ ಯಾವುದೇ ಕೃಷಿ ಹೊಂಡದಲ್ಲಿ ನೀರಿಲ್ಲ. ಹಳ್ಳಗಳಂತೂ ಮೊದಲೇ ಬತ್ತಿ ಹೋಗಿದ್ದು ಈಗ ಕುರಿ ಸಾಕುವವರ ಬದುಕು ಮೂರಾ ಬಟ್ಟೆಯಾಗಿದೆ. ಇತ್ತ ಕುರಿಗಳು ಮೇಯಲು ಮೇವು ಇಲ್ಲ. ಅತ್ತ ಕುಡಿಯಲು ನೀರೂ ಸಿಗುತ್ತಿಲ್ಲ. ಆದ್ದರಿಂದ ಕುರಿಗಾರರು ತಮ್ಮ ಕುರಿ ಆಡುಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಚೆನ್ನಾಗ ಮಳೆ ಆಗಿದ್ದರೆ ಅಡವಿಯಲ್ಲಿ ಸೊಗಸಾಗಿ ಹುಲ್ಲು ಹುಟ್ಟಿ ಕುರಿ ಆಡುಗಳು ಹೊಟ್ಟೆ ತುಂಬಾ ಸುಖವಾಗಿ ಮೇಯುತ್ತಿದ್ದವು. ಆದರೆ ಈಗ ಪರಿಸ್ಥಿತಿ ತಿರುವುಮುರುವಾಗಿದ್ದು ಕುರಿ ಗಾರರು ನಿತ್ಯವೂ ತಮ್ಮ ಕುರಿ ಆಡುಗಳೊಂದಿಗೆ ಸಂಕಟ ಅನುಭವಿಸುತ್ತಿದ್ದಾರೆ. ಕಿಲೋ ಮೀಟರ್‌ಗಟ್ಟಲೆ ಅಲೆದರೂ ಕುರಿಗಳಿಗೆ ನೀರು ದೊ ೆಯುವುದೇ ದುಸ್ತರವಾಗಿದ್ದು ಕುರಿಗಾರರು ಕುರಿ ಆಡುಗಳ ಬಾಡಿದ ಮುಖ ನೋಡುತ್ತ ದಿನ ದೂಡುತ್ತಿದ್ದಾರೆ.

ದಿನವೂ ಓಡುತ್ತಿರುವ ಮೋಡಗಳತ್ತ ಮುಖ ಮಾಡಿ ಮಳೆ ತರಿಸುವಂತೆ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಮುಂದಿನ ದನಗಳಲ್ಲೂ ಮಳೆ ಯಾಗದೆ ಇದ್ದರೆ ಕುರಿಗಾರರ ಮತ್ತಷ್ಟು ಕಷ್ಟ ಎದುರಿಸುವ ಭೀತಿ ಉಂಟಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.