ADVERTISEMENT

ಅನೈತಿಕ ಚಟುವಟಿಕೆಗಳ ಆಶ್ರಯ ತಾಣ ಹಳೇ ಕಟ್ಟಡ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:43 IST
Last Updated 17 ಜುಲೈ 2013, 6:43 IST

ಲಕ್ಷ್ಮೇಶ್ವರ: ಇಲ್ಲಿನ ಹೊಸ ಬಸ್ ನಿಲ್ದಾಣದ ಹತ್ತಿರ ಪುರಸಭೆ ವಾಣಿಜ್ಯ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಇರುವ ಪುರಸಭೆ ಆಡಳಿತಕ್ಕೆ ಸೇರಿದ ಹಳೇ ಮಣ್ಣಿನ ಸಣ್ಣ ಕಟ್ಟಡ ಇದೀಗ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗಿದೆ. ನಿತ್ಯ ಸರಿ ರಾತ್ರಿಯಲ್ಲಿ ಇಲ್ಲಿ ಇಂಥ ಕೆಟ್ಟ ಚಟುವಟಿಕೆಗಳು ನಡೆಯುತ್ತಿವೆ ಎಂದು ಜನರು ಆರೋಪಿಸುತ್ತಿದ್ದಾರೆ.

ಬಹಳ ದಿನಗಳವರೆಗೆ ಈ ಕಟ್ಟಡದಲ್ಲಿ ಹಿಂದೆ ಅಂಗನವಾಡಿ ಕೇಂದ್ರ ಇತ್ತು. ಸಧ್ಯ ಅಂಗನವಾಡಿ ಕೇಂದ್ರವನ್ನು ಬೇರಡೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಪಾಳು ಬಿದ್ದ ಕಟ್ಟಡ ಈಗ ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸೂಕ್ತ ಸ್ಥಳವಾಗಿದೆ. 
 
ಶಿಥಿಲಗೊಂಡ ಈ ಕಟ್ಟಡ ಪಕ್ಕದಲ್ಲಿಯೇ ಮದ್ಯದ  ಅಂಗಡಿ ಇದ್ದು ದಿನಾಲೂ ಕುಡುಕರು ಅಂಗಡಿಯಲ್ಲಿ ಸಾರಾಯಿ ಖರೀದಿಸಿ ರಸ್ತೆಗೆ ಹೊಂದಿಕೊಂಡಿರುವ ಜನನಿಬಿಡ ಈ ಕಟ್ಟಡಕ್ಕೆ ಬಂದು ಸಾರಾಯಿ ಕುಡಿಯುತ್ತ ತಡ ರಾತ್ರಿವರೆಗೆ ದಾಂಧಲೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈಚೆಗೆ ಈ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಇದನ್ನು ಕಣ್ಣಾರೆ ಕಂಡ ಅನೇಕರು ಕೆಲ ಸಂದರ್ಭಗಳಲ್ಲಿ ತಡೆ ಹಿಡಿದಿದ್ದಾರೆ. ಆದರೂ ರಾತ್ರಿಯಾದ ಕೂಡಲೇ ಇಲ್ಲಿ ಸಾಕಷ್ಟು ಅನೈತಿಕ ಚಟಿವಟಿಕೆಗಳು ನಡೆಯುತ್ತಿರುತ್ತವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಕಟ್ಟಡ ಬಸ್ ನಿಲ್ದಾಣಕ್ಕೆ ಬಹಳ ಸಮೀಪ ಇರುವುದರಿಂದ ಇಲ್ಲಿ ಯಾವಾಗಲೂ ಜನ ಸಂಚಾರ ಇರುತ್ತದೆ. ಇಷ್ಟಿದ್ದರೂ ಜನರ ಎದುರೇ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಕೇವಲ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಈ ಕಟ್ಟಡವನ್ನು ತೆಗೆದು ಹಾಕಿ ಜನತೆಗೆ ನೆಮ್ಮದಿ ನೀಡುವ ಜವಾಬ್ದಾರಿ ಪುರಸಭೆ ಮೇಲಿದೆ. ಅಲ್ಲದೆ ತಡ ರಾತ್ರಿವರೆಗೆ ಪುಂಡ ಪೋಕರಿಗಳ ಕಾಟ ಇಲ್ಲಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT