ಶಿರಹಟ್ಟಿ: ಹಲವು ವರ್ಷಗಳಿಂದ ಕುಂಟುತ್ತ ತೆವಳುತ್ತ ಸಾಗುತ್ತಿರುವ ತಾಲ್ಲೂಕು ಕ್ರೀಡಾಂಗಣಕ್ಕೆ ಎರಡನೇ ಬಾರಿ ನವೀಕರಣಕ್ಕೆ ಅನುದಾನ ಬಿಡುಗಡೆಗೊಂಡರೂ ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ.
ಕ್ರೀಡಾಂಗಣವು ಅನೈತಿಕ ತಾಣವಾಗಿ ಮಾರ್ಪಟ್ಟರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಕಳೆದ ಐದಾರು ವರ್ಷಗಳ ಹಿಂದೆ ಸ್ಥಳೀಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನ ಹಿಂಭಾಗದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಅಂದಿನ ಸರ್ಕಾರ 45 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿತು. 9 ಎಕರೆ ವಿಶಾಲವಾದ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಿ ಅದರೊಳಗೆ ಕಬಡ್ಡಿ, ಫುಟ್‌ಬಾಲ್, ವಾಲಿಬಾಲ್, ಟ್ರ್ಯಾಕ್‌ಫೀಲ್ಡ್, ಉದ್ದ ಜಿಗಿತ ಹೀಗೆ ಹಲವಾರು ಕ್ರೀಡೆಗಳಿಗೆ ಅವಕಾಶ ಕಲ್ಪಸಿ ನಿರ್ಮಾಣ ಕಾರ್ಯಕ್ಕೆ ನಾಂದಿ ಹಾಡಲಾಯಿತು.
ಕ್ರೀಡಾಂಗಣಕ್ಕೆ ಇದೀಗ ಎರಡನೇ ಬಾರಿ ಅನುದಾನ ಬಂದರೂ ಇನ್ನು ಅಪೂರ್ಣವಾಗಿವೆ. ಉಪಯೋಗಕ್ಕೆ ಬಳಕೆಯಾಗದೆ ಅನೈತಿಕ ಚಟುವಟಿಕೆ ಮತ್ತು ಕುಡುಕರ ಹಾವಳಿಗೆ ನಲುಗಿ ಕ್ರೀಡಾಂಗಣ ತತ್ತರಿಸಿಹೋಗಿದೆ. ನಶೆಯಲ್ಲಿ ಬಾಟಲಿಗಳನ್ನು ಸಹ ಒಡೆದಿದ್ದು, ಕ್ರೀಡಾಸಕ್ತರು ಕ್ರೀಡಾಂಗಣದೊಳಕ್ಕೆ ಹೆಜ್ಜೆ ಇಡಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ತೋರ್ಪಡಿಸಲು ಉಪಯೋಗವಾಗುವ ಕ್ರೀಡಾಂಗಣ ಸದುಪಯೋಗಕ್ಕೆ ಬರುವ ಮುಂಚಿತವಾಗಿ ವಿನಾಶದ ಅಂಚಿಗೆ ತಲುಪುತ್ತಿರುವುದು ಕಳವಳಕಾರಿ ಸಂಗತಿ. ಅಪ್ರಯೋಜಿತ ಕ್ರೀಡಾಂಗಣದಿಂದ ತಾಲ್ಲೂಕಿನ ವಿವಿಧ ಮೂಲೆಗಳಲ್ಲಿರುವ ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಆತಂಕ ಪಡುವಂತಾಗಿದೆ.
ಕ್ರೀಡಾಂಗಣ ನೈಜ ಸ್ಥಿತಿಯನ್ನು ಅರಿತ ಇಲಾಖೆ ಮೇಲಾಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಕ್ರಮ ಕೈಗೂಂಡು ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೂಡಿಬೇಕೆಂದು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಮತ್ತು ಹಲವಾರು ಯುವ ಸಂಘಟನೆಗಳು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೀವು ಮನವಿ ಕೊಡ್ತಾ ಇರಿ. ನಾವು ನಮ್ಮ ಕೆಲಸ ಮುಂದುವರೆಸುತ್ತಾ ಇರ‌್ತೋವಿ ಎಂಬುದು ಅಧಿಕಾರಿಗಳ ಧೋರಣೆಯಾಗಿದೆ. ಎರಡನೇ ಬಾರಿಗೆ ನವೀಕರಣಕ್ಕೆ 6 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅದರ ಹೊಣೆ ಹೊತ್ತ ಲೋಕೋಪಯೋಗಿ ಇಲಾಖೆ ಅನುದಾನ ಬಳಕೆ ಮಾಡಿದೆ.
ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಬುಡದಲ್ಲಿ 2 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಅದರ ಕಿಡಕಿ ಮತ್ತು ಬಾಗಿಲುಗಳು ಅನ್ಯರ ಪಾಲಾಗಿವೆ. ಕ್ರೀಡಾಪಟುಗಳ ತಯಾರಿ ಕೊಠಡಿಗಳಲ್ಲಿ ಅನೈತಿಕ ಕಾರ್ಯ ಚಟುವಟಿಕೆ ನಡೆಯುತ್ತವೆ. ಒಂದು ಕೂಠಡಿಯ ಬಾಗಿಲು, ಕಿಟಕಿ ಗಾಜುಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ಬೀಗ ಹಾಕದ ಕೂಠಡಿಗಳಲ್ಲಿ ರಾತ್ರಿ ನಡೆಯುವ ಅನೈತಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಅಗತ್ಯವಿದೆ.
ಮೈದಾನದ ತುಂಬೆಲ್ಲಾ ವ್ಯಾಪಕವಾಗಿ ಹರಡಿಕೊಂಡಿರುವ ಗಿಡಗಂಟಿಗಳಿಂದ ತುಂಬಿದ್ದು, ಕ್ರೀಡಾಂಗಣ ಒಳಾಂಗಣದ ನೆಲ (ಮೈದಾನ) ಅಸಮತೋಲನದಿಂದ ಕೂಡಿದೆ.
ಕ್ರೀಡಾಂಗಣದ ಮಧ್ಯೆ ನಿರ್ಮಿಸಿದ ಚರಂಡಿ ಸಹ ಕಿತ್ತುಹೋಗಿದೆ. ನಸುಕಿನ ಸಮಯದಲ್ಲಿ ವಾಯುವಿಹಾರಕ್ಕೆ ಆಗಮಿಸುವ ವೃದ್ಧರು ಮತ್ತು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರೀಡಾಸಕ್ತರ ಅಹವಾಲನ್ನು ಅರಿತು ಕೂಡಲೇ ದು:ಸ್ಥಿಯಲ್ಲಿರುವ ಕ್ರೀಡಾಂಗಣವನ್ನು ಸುಸ್ಥಿತಿಗೆ ತರಬೇಕು ಎಂಬುದು ಕಳಕಳಿಯ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.