ADVERTISEMENT

ಆತ್ಮರಕ್ಷಣೆಗೆ ಕರಾಟೆ ಅಗತ್ಯ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 7:03 IST
Last Updated 14 ಜೂನ್ 2015, 7:03 IST
ಗದಗದಲ್ಲಿ ನಡೆಯುತ್ತಿರುವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕತಾಜ ಸ್ಪರ್ಧೆಯಲ್ಲಿ ಕ್ರೀಡಾಪಟುಗಳ ನೀಡಿದ ಪ್ರದರ್ಶನ
ಗದಗದಲ್ಲಿ ನಡೆಯುತ್ತಿರುವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕತಾಜ ಸ್ಪರ್ಧೆಯಲ್ಲಿ ಕ್ರೀಡಾಪಟುಗಳ ನೀಡಿದ ಪ್ರದರ್ಶನ   

ಗದಗ:  ಆರೋಗ್ಯ ಚೆನ್ನಾಗಿದ್ದರೆ ಭವಿಷ್ಯ ಭವ್ಯವಾಗಿಸಿಕೊಳ್ಳಬಹುದು. ಮನಸ್ಸು ಪ್ರಸನ್ನವಾಗಲು ಕ್ರೀಡೆಗಳು ಸಹಾಯಕವಾಗುತ್ತವೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಹೇಳಿದರು.

ನಗರದ ಚೇತನ ಕರಾಟೆ ವಿವಿಧೋದ್ದೇಶಗಳ ಸಂಘ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಮೂರನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ, ಸಾಹಿತ್ಯ, ಕಲೆ, ರಂಗಕಲೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಗೌರವ ಜಿಲ್ಲೆಗೆ ಸಲ್ಲುವುದು. ಇದರ ಜೊತೆಗೆ ಈ ಭಾಗದಲ್ಲಿ ಕರಾಟೆ ಕಲೆ ವ್ಯಾಪಕವಾಗಿ ಪರಿಚಯಿಸುವಲ್ಲಿ ಪರಶುರಾಮ ಹಬೀಬ ಶ್ರಮ ಪಟ್ಟಿದ್ದಾರೆ.  ಕರಾಟೆ  ಆತ್ಮ ರಕ್ಷಣೆ ಕಲೆ.  ಗುರುಗಳಿಂದ ಕಲಿತ ಕಲೆಯನ್ನು ದುರುಪಯೋಗ ಮಾಡದೆ ಸ್ವಯಂ ರಕ್ಷಣೆಗೆ ಮಾತ್ರ ಉಪಯೋಗ ಮಾಡಿದರೆ ಗೌರವ ಹೆಚ್ಚುತ್ತದೆ. ಮಹಿಳೆಯರು ಕೂಡ ಈ ಕಲೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಯಾವುದೇ ವಿದ್ಯೆ ಒಲಿಯಲು ಗುರುವಿನ ಕರುಣೆ ಇರಬೇಕು. ಗುರುಭಕ್ತಿ ಇರುವವ ವಿದ್ಯೆಯಲ್ಲಿ ಪರಿಣತವಾಗಬಲ್ಲ. ಗುರು, ತಾಯಿ  ಮತ್ತು ಸಮಾಜದ ಋಣ ತೀರಿಸುವ ಮನುಷ್ಯನ ಬದುಕು ಸಾರ್ಥಕ ಎನಿಸಬಲ್ಲದು. ಆದ್ದರಿಂದ ಬದುಕಿನಲ್ಲಿ ಸದಾ ಬದಲಾವಣೆ ಬಯಸಬೇಕು. ವೈಯಕ್ತಿಕ ಹಿತಕ್ಕಿಂತ ಸಮಾಜದ ಹಿತ ಬಯಸುವಾತನ ಜೀವನ ಪರಿಪೂರ್ಣ. ಕರಾಟೆ ಕಲೆ ಜಿಲ್ಲೆಯಲ್ಲಿ  ವ್ಯಾಪಕವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ನುಡಿದರು.

ಮುತ್ತು ಬ್ಯಾಹಟ್ಟಿ ರಚಿಸಿದ ‘ಮುತ್ತಿನ ಹನಿ’ ಕವನ ಸಂಕಲನವನ್ನು  ಜಿಲ್ಲಾಧಿಕಾರಿ ಲೋಕಾರ್ಪಣೆ ಮಾಡಿದರು.

ಸಂಘದ ಅಧ್ಯಕ್ಷ ರಾಘವೇಂದ್ರ ಹುಲಕೋಟಿ, ಎಪಿಎಂಸಿ ಉಪಾಧ್ಯಕ್ಷ ಸಿದ್ದು ಪಾಟೀಲ, ಹಿರಿಯರಾದ ಗಂಗಣ್ಣ ಕೋಟಿ, ಭರತ ಇರಾಳ, ರಾಘವೇಂದ್ರ ಗುಜ್ಜಲ, ಹಿರಿಯ ಕರಾಟೆ ಪಟು ಅಣ್ಣಪ್ಪ ಮಾರ್ಕಲ್, ಮೈತ್ರಾ ಪಾಟೀಲ, ಮಂಜುನಾಥ ಕುರಿ, ಬಸವರಾಜ ಹೊಂಬಾಳಿ, ಚೇತನ ಹಬೀಬ, ದ್ಯಾಮಪ್ಪ ಹಾವೇರಿ ಹಾಜರಿದ್ದರು. ವಿಜಯಪುರ, ಧಾರವಾಡ, ರಾಣೆಬೆನ್ನೂರು, ಹೊಸಪೇಟೆ, ಬಳ್ಳಾರಿ, ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆ ಸೇರಿದಂತೆ  600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ADVERTISEMENT

ಮೊದಲ ದಿನ ವಿವಿಧ ವಿಭಾಗದ ಕತಾಜ ಸ್ಪರ್ಧೆಗಳು ನಡೆದವು.  ಮಂಜುನಾಥ ಕುರಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ   ನಿರೂಪಿಸಿದರು.

***
ಕರಾಟೆ ಕಲಿತ ಹಲವು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ  ಭಾಗವಹಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಪರಶುರಾಮ ಹಬೀಬ,  ಮುಖ್ಯ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.