ADVERTISEMENT

ಆಸರೆ ಮನೆ ಹಂಚಿಕೆ ತಾರತಮ್ಯ: ಧರಣಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 11:07 IST
Last Updated 14 ಜನವರಿ 2016, 11:07 IST
ಆಸರೆ ಮನೆ ಹಂಚಿಕೆ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಮಾಳವಾಡ ಗ್ರಾಮಸ್ಥರು ರೋಣ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಆಸರೆ ಮನೆ ಹಂಚಿಕೆ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಮಾಳವಾಡ ಗ್ರಾಮಸ್ಥರು ರೋಣ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ರೋಣ: ಬೆಣ್ಣೆಹಳ್ಳ ನೆರೆ ಹಾವಳಿಯಿಂದ ಸ್ಥಳಾಂತರಗೊಂಡ ತಾಲ್ಲೂಕಿನ ಮಾಳವಾಡ ಗ್ರಾಮದ  ಆಸರೆ ಮನೆ  ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಮರು ಸಮೀಕ್ಷೆ ಕೈಗೊಂಡು ಅರ್ಹರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿ  ಬುಧವಾರ ಮಾಳವಾಡ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಎನ್.ಬಿ. ಬುದ್ಧನಗೌಡ್ರ, ಸಿ.ಎಚ್. ಚಲವಾದಿ ಮಾತನಾಡಿ, 2009ರಲ್ಲಿ ಬೆಣ್ಣೆಹಳ್ಳ ನೆರೆ ಹಾವಳಿಗೆ ತುತ್ತಾಗಿ ಮಾಳವಾಡ ಗ್ರಾಮವು ಸ್ಥಳಾಂತರಗೊಂಡು, ಒಟ್ಟು 604 ಆಸರೆ ಮನೆಗಳನ್ನು ನಿರ್ಮಿಸಿದ್ದು, ಅದರಲ್ಲಿ  508 ಮನೆಗಳು ಹಂಚಿಕೆ ಮಾಡಲಾಗಿದೆ. ಉಳಿದ 96 ಆಸರೆ ಮನೆಗಳನ್ನು ಅನರ್ಹರಿಗೆ ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಒಂದೊಂದು ಕುಟುಂಬಕ್ಕೆ 3ರಿಂದ 4 ಮನೆ ಹಂಚಿಕೆಯಾಗಿವೆ. ಈ ಕುರಿತು ಮರು ಸಮೀಕ್ಷೆ ಕೈಗೊಂಡು ಅರ್ಹರಿಗೆ ಆಸರೆ ಮನೆ ವಿತರಿಸುವಂತೆ ಕಳೆದೊಂದು ವರ್ಷದಿಂದ ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯ್ತಿ ಪಿಡಿಒ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎಚ್. ಚಲವಾದಿ ಮಾತನಾಡಿ ಫಲಾನುಭಾವಿಗಳ ಮರು ಸಮೀಕ್ಷೆಗೆ ಒತ್ತಾಯಿಸಿದ್ದರೂ ಕ್ರಮ ಕೈಗೊಳ್ಳದಿರುವ ಕಾರಣ ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದರು.

ಈ ಬಗ್ಗೆ ಧರಣಿ ನಡೆಸಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಐ.ಎನ್. ಚಂದ್ರಯ್ಯ ಅವರು ಜನವರಿ 16ರ ಒಳಗೆ ಮರು ಸಮೀಕ್ಷೆ ನಡೆಸಿ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಮನೆ ಹಂಚಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಸಮೀಕ್ಷೆ ನಡೆದಿಲ್ಲ ಎಂದರು.

ಪಿಡಿಒ ಜಿ.ಪಿ. ತಹಶೀಲ್ದಾರ್ ಅವರನ್ನು ಕೇಳಿದಾಗ ಸಮರ್ಪಕ ಉತ್ತರ ನೀಡುತ್ತಿಲ್ಲ. ನ್ಯಾಯ ಸಿಗುವವರೆಗೂ ಇದೇ 14ರಿಂದ ಅನಿರ್ದಿಷ್ಟ ಅಹೋ ರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ರುದ್ರಯ್ಯ ರೇಷ್ಮಿ, ಮುತ್ತಪ್ಪ ಚಲವಾದಿ, ಬಸವರಾಜ ಚಲವಾದಿ, ಅಶೋಕ ಬಳಿಗಾರ, ಕಮಲವ್ವ ತಳವಾರ, ಶಾಂತವ್ವ ಆರಮನದ, ಮಲ್ಲಪ್ಪ ರಾಮಣ್ಣವರ, ಕಮಲವ್ವ ಬೆವಿನಕಟ್ಟಿ, ಶಿವಬಾಯವ್ವ ಮಣ್ಣೂರ,  ಸಂಗಪ್ಪ ಮಾಂತಶೆಟ್ಟಿ, ಚನ್ನಪ್ಪ ಚಲವಾದಿ, ಬಸಪ್ಪ ನೀಲಗುಂದ,  ಶಾಂತವ್ವ ಹರಕೇರಿ, ಯಲ್ಲವ್ವ ಹಡಗಲಿ, ಯಮನವ್ವ ನಧಾಪ, ಪರಸಪ್ಪ ಗಾಣಿಗೇರ, ಕಮಲವ್ವ ಮರಚಮ್ಮನವರ, ಶಾಂತವ್ವ ಕಾತರಕಿ, ನಿಂಗನಗೌಡ ಬುಡ್ಡನಗೌಡ್ರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.