ADVERTISEMENT

ಇತಿಮಿತಿಯೊಳಗೆ ಬದುಕಲು ಕಲಿಯಿರಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:25 IST
Last Updated 21 ಫೆಬ್ರುವರಿ 2012, 6:25 IST

ಮುಂಡರಗಿ: `ಮನುಷ್ಯನಲ್ಲಿ ಅಡಗಿರುವ ದುರಾಸೆಯು ಸಮಾಜವು ವಿಧಿಸಿರುವ ನಿಯಮಗಳನ್ನು ಮುರಿಯುವಂತೆ ಅವನಿಗೆ ಪ್ರೇರೇಪಿಸುತ್ತಿದ್ದು, ತನ್ನ ಇಷ್ಟಗಳನ್ನು ಪೂರೈಸಿಕೊಳ್ಳಲು ಅವನು ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇತರರಿಗೆ ನೋವಾಗದಂತೆ ತಮ್ಮ ಇತಿಮಿತಿಯೊಳಗೆ ಬದುಕುವುದನ್ನು ಕಲಿಯಬೇಕು~ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಕಾವೇರಿ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲ್ಲೂಕು ವಕೀಲ ಸಂಘಗಳು ಸಂಯುಕ್ತವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಅರಿವು ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜಗತ್ತು ಮತ್ತು ಜಗತ್ತಿನಲ್ಲಿರುವ ಎಲ್ಲ ವಸ್ತುಗಳು ಯಾರೊಬ್ಬರಿಗೂ ಸೇರಿದವುಗಳಲ್ಲ. ಅವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಆದ್ದರಿಂದ ನಾವೆಲ್ಲ ಸ್ವಾರ್ಥವನ್ನು ಬಿಟ್ಟು ಇತರರಿಗೆ ತೊಂದರೆಯಾಗದಂತೆ ಬದುಕುವುದನ್ನು ಕಲಿಯಬೇಕಾಗಿದ್ದು, ಎಲ್ಲರೂ ಉತ್ತಮವಾಗಿ ಬದುಕುವುದನ್ನು ಕಲಿತರೆ ಯಾರಿಗೂ ತೊಂದರೆಯಾಗುವುದಿಲ್ಲ~ ಎಂದು ತಿಳಿಸಿದರು.

`ಸಮಾಜದಲ್ಲಿ ಶಾಂತಿ ಸುವ್ಯೆವಸ್ಥೆ ಕಾಪಾಡಲು ರೂಪಿಸಿರುವ ಕಾನೂನಿಗೆ ನಾವೆಲ್ಲರೂ ಗೌರವ ನೀಡಬೇಕು. ಈ ದೇಶದ ಕಾನೂನು ತುಂಬಾ ಕಠಿಣವಾಗಿದ್ದು, ತಪ್ಪು ಮಾಡಿದವರು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನೆಲದ ಕಾನೂನಿಗೆ ದಕ್ಕೆಯಾಗದಂತೆ ನಾವೆಲ್ಲ ಸೌಜನ್ಯದಿಂದ ಸಹಬಾಳ್ವೆ ನಡೆಸಬೇಕು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ರಾಟಿ ತಿಳಿಸಿದರು.

ಸರಕಾರಿ ಅಭಿಯೋಜಕ ವಿ.ಎಸ್.ಪಾಟೀಲ ಹಾಗೂ ಮತ್ತಿತರರು ಮಾತನಾಡಿದರು. ವಕೀಲರಾದ ಜಿ.ಬಿ. ಕುಲಕರ್ಣಿ, ಎಂ.ವಿ. ಅರಳಿ, ಎನ್.ವಿ. ಹಿರೇಮಠ, ಜಿ.ಜಿ. ಈಳಗೇರ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.