ADVERTISEMENT

ಉದ್ಯೋಗ ಖಾತ್ರಿ: ಕೂಲಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 9:40 IST
Last Updated 16 ಮಾರ್ಚ್ 2012, 9:40 IST

ಡಂಬಳ: ಸಮೀಪದ ಮೇವುಂಡಿ ಗ್ರಾಮದಲ್ಲಿ ಗುರುವಾರ ಉದ್ಯೋಗ ಖಾತ್ರಿಯಲ್ಲಿ ದುಡಿದ ಕೂಲಿ ಹಣವನ್ನು ನೀಡಬೇಕು ಎಂದು ಒತ್ತಾಯಿಸಿ ಕೂಲಿಕಾರರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಕಾಮಗಾರಿ ಕೆಲಸ ಸ್ಥಗಿತಗೊಳಿಸಿದ ಕೂಲಿಕಾರರು ಈವರೆಗೆ ಮಾಡಿದ ಕೆಲಸದ ಕೂಲಿ ಹಣ ಕೊಡಬೇಕು ಎಂದು ಆಗ್ರಹಿಸಿ ತಮ್ಮ ಗುದ್ದಲಿ ಸಲಿಕೆ ಜತೆಗೆ ಪಂಚಾಯಿತಿ ಎದುರು ಟಿಕಾಣಿ ಹೂಡಿದರು.

 ಪಂಚಾಯಿತಿ ಕಾರ್ಯದರ್ಶಿ ಸಂಶಿ ಸ್ಥಳಕ್ಕೆ ಬಂದು ಈಗಾಗಲೇ ಕೂಲಿ ಹಣದ ಚೆಕ್ ಬರೆಯಲಾಗಿದೆ. ಅಧ್ಯಕ್ಷರ ಸಹಿ ಮಾಡಿಸಿ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು ಎಂದು ವಿವರಿಸ ತೊಡಗಿದಾಗ ಕೂಲಿಕಾರರು ಕಾರ್ಯದರ್ಶಿ ಸಂಶಿಯನ್ನು ತರಾಟೆಗೆ ತೆಗೆದುಕೊಂಡರು.

 ಕಾರ್ಯದರ್ಶಿ ಮಾತಿಗೆ ಗಮನ ಕೊಡದ ಕೂಲಿಕಾರರು ಪ್ರತಿಭಟನೆ ಮುಂದುವರೆಸಿದಾಗ ಪಂಚಾಯಿತಿ ಸದಸ್ಯ ಅಂದಪ್ಪ ಹಾರೋಗೇರಿ ಕೂಲಿಕಾರರ ಮನವೊಲಿಸಿ 56 ಹೊಲಗಳಲ್ಲಿ ಈಗಾಗಲೇ 48 ಹೊಲದಲ್ಲಿ ಬದುವು, ಒಡ್ಡು ನಿರ್ಮಾಣ ಮಾಡಲಾಗಿದೆ ಎಂದರು.   14.5 ಲಕ್ಷ ಎಂಐಎಸ್ ಮಾಡಿ ಕಳಿಸಲಾಗಿದೆ ಅದರಲ್ಲಿ 12.5 ಲಕ್ಷ ಹಣ ಬಂದಿದೆ, ಉಳಿದ 2 ಲಕ್ಷ ಕೊರತೆ ಇದೆ. ಈ ಬಗ್ಗೆಯೂ ತಾಪಂ ಇಓ ಅವರ ಜತೆ ಚರ್ಚಿಸಲಾಗಿ ಅದು ಕೂಡಾ ಮುಂದಿನ ಹಂತದಲ್ಲಿ ಬಿಡುಗಡೆ ಗೊಳಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕೆಲಸ ಸ್ಥಗಿತಗೊಳಿಸುವುದು ಬೇಡ. ಎರಡು ದಿನದಲ್ಲಿ ಕೂಲಿಕಾರರಿಗೆ ಹಣ ಕೊಡಿಸುವುದಾಗಿ ತಿಳಿಸಿದರು.

 ಪ್ರತಿಭಟನೆಕಾರರು ಕಾರ್ಯದರ್ಶಿ ಮೇಲೆ ಹರಿಹಾಯ್ದು, ಬರದೂರ, ಹೈತಾಪೂರ, ಎಕಲಾಸಪೂರ ಕೂಲಿ ಕಾರರಿಗೆ ಹಣ ಕೊಟ್ಟು ಉಳಿದರೆ ಮಾತ್ರ ಮೇವುಂಡಿ ಕೂಲಿಕಾರರಿಗೆ ವಿತರಿಸ ಲಾಗುವುದು ಎಂದು ಹೇಳಿದ್ದಾರೆ, ಹೀಗಾಗಿ ನಾವು ಪ್ರತಿಭಟಿ ಬೇಕಾಯಿತು ಎಂದರು.

ಕಾರ್ಯದರ್ಶಿ ಹಾಗೆ ಹೇಳಿಲ್ಲ ಎಂದು ವಾದಿಸತೊಡಗಿದಾಗ ಪ್ರತಿಭಟನಾ ಕಾರರು ಹಾಗಿದ್ದರೆ ಈಗಲೇ ಕೂಲಿ ಕೊಡಿರಿ ಎಂದು ಮತ್ತೆ ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿ ಸದಸ್ಯ ಅಂದಪ್ಪ ಹಾರೂಗೇರಿ ಅವರು ಕೂಲಿಕಾರರನ್ನು ಸಮಾಧಾನಿಸಿ ನಿಮಗೆ ಕೂಲಿ ಕೊಡಿಸುವದಕ್ಕಾಗಿ ಸ್ವತ: ತಾವೇ ತಾಲ್ಲೂಕು ಪಂಚಾಯಿತಿಗೆ ಹೋಗಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹೇಳಿದ್ದಾಗಿ ತಿಳಿಸಿದರು.

ಹಣದ ಚೆಕ್ ಬರೆಸಲಾಗಿದೆ ಇಓ ಅವರೂ ಕೂಡ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಕೂಲಿ ಕೊಡಲು ವಿಳಂಬ ಮಾಡಬಾರದು ಎಂದಿದ್ದಾರೆ. ಕೂಡಲೇ ಕೂಲಿ ಹಣ ಕೊಡಲಾಗುವುದು ಎಂದು ತಿಳಿಸಿದಾಗ ಕೂಲಿಕಾರರು ಪ್ರತಿಭಟನೆ ಹಿಂತೆಗೆದುಕೊಂಡರು. 

ಖಾತೆಗೆ ಹಣ ಜಮಾ ಇಲ್ಲ
ಇದೇ ಸಂದರ್ಭದಲ್ಲಿ ಎಂ.ಎಚ್‌ವಾಲಿಕಾರ ಗ್ರಾಮದ ಕೆಲವರಿಗೆ ತೆಂಗಿನಮರ ಹಚ್ಚಿದ ಫಲಾನುಭವಿಗಳಿಗೆ ತಲಾ 75 ರೂ. ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಖಾತೆ ತೆರೆಯಿಸಿ ಯಾವ ಫಲಾನು ಭವಿಗೂ ಹಣ ಜಮಾ ಮಾಡಿರುವದಿಲ್ಲ ತೆಂಗಿನ ಮರ ಫಿಟ್ಸ್ ಫಲಾನುಭವಿ ತಾವೇ ತೆಗೆಸಿಕೊಂಡಿದ್ದಾರೆ, ಮಂಜೂ ರಾದ ಹಣ ಎಲ್ಲಿ ಹೋಯಿತು ತನಿಖೆ ಮಾಡಿರಿ ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಸಂಶಿ ಅದು ನಮ್ಮ ಅವಧಿಯಲ್ಲಿ ನಡೆದಿಲ್ಲ ಎಂದಾಗ ಯಾರೇ ಇರಲಿ ಹಣ ಎಲ್ಲಿ ಹೋಯಿತು ವಿಚಾರಣೆ ಮಾಡಿರಿ ಎಂದರು.

ಪ್ರತಿಭಟನೆಯಲ್ಲಿ ರಾಮಪ್ಪ ತಳವಾರ, ಶಿವಲೀಲಾ ಕೊರ್ಲಹಳ್ಳಿ, ನಿರ್ಮಲವ್ವ ಶಿದ್ನೆಕೊಪ್ಪ, ಸಿದ್ದವ್ವ ತಳವಾರ, ಮಾರುತಿ ಶಿದ್ನೆಕೊಪ್ಪ, ಬಸವಣ್ಣೆವ್ವ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.