ADVERTISEMENT

ಒಡೆದು ಆಳುವ ನೀತಿ ನಿಲ್ಲಬೇಕು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 7:00 IST
Last Updated 13 ಸೆಪ್ಟೆಂಬರ್ 2011, 7:00 IST

ಗದಗ: ಬಡತನ, ನಿರುದ್ಯೋಗ, ಅನಕ್ಷರತೆಯನ್ನು ಹೋಗಲಾಡಿಸುವ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಗದೀಶ ಕೊಪ್ಪ ಹೇಳಿದರು. ಸ್ಥಳೀಯ ನಗರಸಭೆ ಸಭಾಭವನದಲ್ಲಿ ಭಾನುವಾರ ನಡೆದ ಭಾರತ ಸಂವಿಧಾನ ಮತ್ತು ಭಗವದ್ಗೀತೆ ದುಂಡು ಮೇಜಿನ ಸಭೆಯಲ್ಲಿ ಅವರು ಲಡಾಯಿ ಪ್ರಕಾಶನದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಂದು ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಬೌದ್ಧಿಕ ದಾರಿದ್ರ್ಯತನವನ್ನು ತುಂಬುತ್ತಿವೆ. ಇದಕ್ಕೆ ಪೂರಕವಾಗಿ ಕೆಲ ರಾಜಕೀಯ ಪಕ್ಷಗಳು ಸಹ ಕಾರ್ಯನಿರ್ವಹಿಸುತ್ತಿವೆ. ಮುಗ್ಧ ವಿದ್ಯಾರ್ಥಿ ಸಮೂಹಕ್ಕೆ ಭಗವದ್ಗೀತೆ ಬೋಧನೆ ಹೆಸರಲ್ಲಿ ಧರ್ಮಾಂಧತೆ ಮೂಡಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿನ ಜನರು ಧಾರ್ಮಿಕ ಸಾಮರಸ್ಯ, ಭಾವೈಕ್ಯತೆ ಪದ್ಧತಿಯನ್ನು ಅಳವಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೂ ಶಾಲಾ ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆ ಮಾಡಲು ಮುಂದಾಗಿರುವುದೇಕೆ? ಎಂದು ಪ್ರಶ್ನಿಸಿದರು.

ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇವರಿಗೆಲ್ಲಾ ತಕ್ಕ ಪಾಠ ಕಲಿಸಬೇಕಿದೆ. ಜನರು ಜಾಗೃತರಾದಾಗ ಮಾತ್ರ ಇವರ ಆಟ ನಿಲ್ಲಿಸಲು ಸಾಧ್ಯ ಎಂದರು.

ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿದರು. ವೆಂಕಟೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೆಂಚರೆಡ್ಡಿ, ಎಂ.ಎಸ್. ಹಡಪದ, ಬಸವರಾಜ ಹೂಗಾರ, ಡಾ. ಅರ್ಜುನ ಗೊಳಸಂಗಿ, ಡಾ. ಎಚ್.ಬಿ. ಪೂಜಾರ, ಪ್ರೊ. ಬಸವರಾಜ ಪೂಜಾರ, ಎಸ್.ವೈ. ಹೊನ್ನುಂಗುರ, ಡಾ. ಆರ್.ಎಲ್. ಹಂಸನೂರ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.