ADVERTISEMENT

ಕತ್ತೆ ಮದುವೆಗೂ ಹರ್ಷಗೊಳ್ಳದ ವರುಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2011, 5:50 IST
Last Updated 13 ಆಗಸ್ಟ್ 2011, 5:50 IST
ಕತ್ತೆ ಮದುವೆಗೂ ಹರ್ಷಗೊಳ್ಳದ ವರುಣ
ಕತ್ತೆ ಮದುವೆಗೂ ಹರ್ಷಗೊಳ್ಳದ ವರುಣ   

ಡಂಬಳ: ಸಮೃದ್ಧ ಮಳೆ ಬಂದು ಹೊಲದ ತುಂಬ ಹಸಿರು ತುಂಬಲಿ ಎನ್ನುವ ಆಸೆಯಿಂದ ವರುಣದೇವವನ್ನು ಸಂತೃಪ್ತಪಡಿಸಲು ಅದ್ದೂರಿಯಾಗಿ ಕತ್ತೆ ಮದುವೆ ಮಾಡಿದರು ಸಹ ಒಂದು ಹನಿ ನೀರು ನೆಲಕ್ಕೆ ಬಿದ್ದಿಲ್ಲ. ಮತ್ತೆ ಬರದ ಕಡೆ ಮುಖಮಾಡಿ ನಿಂತಿವೆ ಡಂಬಳ ಸುತ್ತಮುತ್ತಲ ಗ್ರಾಮ.

ವರ್ಷದ ಆರಂಭದಲ್ಲಿ ಭರಪೂರ ಮಳೆ ಸುರಿದು ರೈತ ಸಮೂಹದಲ್ಲಿ ಹರ್ಷ ಕಂಡಿತು. ಭರದಿಂದ ಬಿತ್ತನೆಯನ್ನು ಸಹ ಮಾಡಿದರು. ಮನೆಯಲ್ಲಿ ಇದ್ದ ಕಾಳು-ಬೀಜವನ್ನೆಲ್ಲ ಜಮೀನಿಗೆ ಹಾಕಿದರು. ಇದೇ ರೀತಿ ಮಳೆ ಬಿದ್ದರೆ ಉತ್ತಮ ಫಸಲು ಗ್ಯಾರಂಟಿ ಎಂದು ಕೊಂಡರು.

ಆದರೆ ಒಂದು ಸಾರಿ ಮುಖ ತೋರಿಸಿ ಹೋದ ಮಳೆ ಮತ್ತೆ ತಲೆ ಹಾಕಿಯೇ ಇಲ್ಲ. ಆಕಾಶದಲ್ಲಿ ದಟ್ಟ ಮೋಡ ಕವಿಯುತ್ತದೆ. ಇನ್ನೇನು ಭಾರಿ ಹನಿ ಭೂಮಿಗೆ ಬೀಳುತ್ತದೆ ಎನ್ನುವ ನಿರೀಕ್ಷೆ. ಆದರೆ ಕ್ಷಣ ಮಾತ್ರದಲ್ಲಿ ಗಾಳಿಯೊಂದಿಗೆ ಒಟ್ಟಾಗುವ ಮೋಡ ಮುಂದೆ ಸಾಗುತ್ತದೆ. ತಮ್ಮ ತಲೆಯ ಮೇಲೆ ಪ್ರತಿನಿತ್ಯ ನಡೆಯುವ ಈ ದೃಶ್ಯವನ್ನು ನೋಡಿ-ನೋಡಿ ರೈತರು ದಿಕ್ಕು ತೋಚದೆ ಚಿಂತಾಕ್ರಾಂತರಾಗಿದ್ದಾರೆ.

ಬಿತ್ತನೆಗೊಂಡ ಬೆಳೆ ಸಂಪೂರ್ಣ ಹಾಳಾಗುವ ಆತಂಕದಿಂದ ಊರಿನ ಹಿರಿಯರ ಆಶಯದಂತೆ ಭಜನೆ ಸಪ್ತಾಹ, ಗುರ್ಜಿ ಪೂಜೆ, ಅನ್ನಸಂತರ್ಪಣೆ, ವಿವಿಧ ಬಗೆಗೆಯ ಆಚರಣೆ ನಡೆಸಿದರು ಜನರು, ಮಳೆಯ ದೇವರು ಕೃಪೆ ತೋರದೆ ಇರುವುದರಿಂದ ಕತ್ತೆಗಳ ಮದುವೆ ಮೊರೆ ಹೋಗಿದ್ದಾರೆ.    

ಡಂಬಳ ಸಮೀಪದ ಪೇಠಾಆಲೂರಿನಲ್ಲಿ ಕತ್ತೆ ಮದುವೆಯನ್ನು ಬ್ಯಾಂಡ್‌ಸೆಟ್, ಝಾಂಜ್‌ಮೇಳದೊಂದಿಗೆ ಅದ್ದೂರಿಯಾಗಿ ಮಾಡಲಾಯಿತು.

 ಗ್ರಾಮದ ರೈತರು ಹಾಗೂ ರೈತ ಮಹಿಳೆಯರು ಕತ್ತೆಗಳಿಗೆ ವಿಭಿನ್ನ ರೀತಿಯ ಜೂಲ್ ಹಾಕಿ, ಸಿಂಗಾರ ಮಾಡಿದ್ದರು. ಮದುಮಗ-ಮದುಮಗಳ ರೀತಿ ಸಜ್ಜುಗೊಳಿಸಿ ಕತ್ತೆಗಳಿಗೆ ಆರತಿ ಮಾಡಲಾಯಿತು ನಂತರ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಆದರೂ ಮಳೆ ಮಾತ್ರ ಇಲ್ಲ.

ಪೇಠಾಆಲೂರ, ಮೇವುಂಡಿ, ಬರದೂರ, ಹೈತಾಪುರ, ಹಳ್ಳಿಕೇರಿ, ಹಳ್ಳಿಗುಡಿ ಡೋಣಿ ಸೇರಿದಂತೆ ಇತರೆಡೆ ಬಿತ್ತನೆಯಾದ ಬೆಳೆ ತೇವಾಂಶ ಕೊರತೆಯಿಂದ ಬಾಡುವ ಆತಂಕ ಎದುರಾಗಿದೆ. ಮಳೆಯನ್ನೇ ನಂಬಿ ಬಿತ್ತನೆ ಕಾರ್ಯ ಕೈಗೊಳ್ಳಲು ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರಲ್ಲಿ ಕತ್ತೆ ಮದುವೆ ನಂತರ ಮಳೆ ಸುರಿಯುತ್ತದೆ ಎನ್ನುವ ಆಶಾಭಾವನೆಯಿಂದ ಇರುವ ರೈತರು ರಸಗೊಬ್ಬರ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.