ADVERTISEMENT

ಕಲಾಭಿರುಚಿ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 11:05 IST
Last Updated 4 ಜನವರಿ 2011, 11:05 IST

ಗದಗ: ಪ್ರತಿಯೊಬ್ಬರೂ ಕಲಾಭಿರುಚಿಯನ್ನು ಬೆಳೆಸಿಕೊಂಡು ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಅಭಿಪ್ರಾಯಪಟ್ಟರು. ನಗರದ ಲಯ ಕಲಾ ಮನೆ ಕಲಾವಿದರ ಸಾಂಸ್ಕೃತಿಕ ಸಂಸ್ಥೆಯಿಂದ ಶುಕ್ರವಾರ ನಡೆದ ಸಮಾರಂಭದಲ್ಲಿ ‘ವರ್ಣಬಿಂದು’ ಕಲಾ ಪ್ರಶಸ್ತಿಯನ್ನು ಕಲಾವಿದ ಎನ್.ಎ. ಹರ್ಲಾಪೂರ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

‘ಕಲಾವಿದರು ಸ್ಫೂರ್ತಿ, ತಪ್ಪಸ್ಸಿನಿಂದ ಕಲೆಯನ್ನು ರೂಪಿಸಿಕೊಳ್ಳಬೇಕು. ಉತ್ತಮ ಕಲಾಭಿರುಚಿ ಬೆಳೆಸಿಕೊಳ್ಳಬೇಕು. ಮೊದಲು ಕುಂಚ ಹಿಡಿದು ಚಿತ್ರ ಬಿಡಿಸುವ ಕಲಾವಿದರಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ಫ್ಲೆಕ್ಸ್ ಮತ್ತು ಕಂಪ್ಯೂಟರ್‌ನಿಂದಾಗಿ ಕಲಾವಿದರು ಚಿತ್ರಕಲೆಯಿಂದ ದೂರ ಉಳಿಯುವಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕಲಾವಿದರನ್ನು ಗುರುತಿಸಿ ಗೌರವಿಸುವಂತಹ ಲಯ ಕಲಾ ಮನೆ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ. ಪ್ರಶಸ್ತಿಗೆ ಭಾಜನರಾದ ಎನ್.ಎ. ಹರ್ಲಾಪೂರ ಅವರು ಚಿತ್ರಕಲೆಯಲ್ಲಿ ಲಯವಾಗಿದ್ದಾರೆ ಎಂದು ಹೇಳಿದರು. ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ‘ಕಠಿಣ ತಪಸ್ಸನ್ನು ಮಾಡಿದಾಗ ಸುಂದರವಾಗಿ ಕಲಾಕೃತಿ ರಚಿಸಲು ಸಾಧ್ಯವಾಗುತ್ತದೆ. ಯಾವುದು ಮನಸ್ಸನ್ನು ಕರಗಿಸುತ್ತದೆಯೋ ಅದನ್ನೇ ಕಲೆ ಎನ್ನುವುದು. ಅದು ಉಪಾಸನೆಗಿಂತಲೂ ಕಠಿಣವಾಗಿರುತ್ತದೆ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದ ಎನ್.ಎ. ಹರ್ಲಾಪುರ, ‘ಎಂ.ಎ. ಚೆಟ್ಟಿ ಅವರು ಮಹಾನ ಕಲಾವಿದರು. ಅವರ ಹೆಸರಿನಲ್ಲಿ ತಮಗೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಉಪನ್ಯಾಸಕ ನಾರಾಯಣ ಹಿರೇಕೊಳಚಿ ಅವರಿಂದ ಮಂಗಳ ನಿನಾದ ನಡೆಯಿತು. ಉದ್ಯಮಿ ಈಶ್ವರಸಾ ಮೇರವಾಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲಯಾ ಕಲಾ ಮನೆ ಸಂಸ್ಥೆ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹೇಶ ಪತ್ತಾರ, ಎ.ಎಸ್. ಮಕಾನದಾರ ಮತ್ತಿತರರು ಹಾಜರಿದ್ದರು. ಉಪನ್ಯಾಸಕ ಅನ್ನದಾನಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.