ADVERTISEMENT

`ಕಲೆ ಅನಾವರಣಕ್ಕೆ ಪ್ರತಿಭಾ ಕಾರಂಜಿ'

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 9:09 IST
Last Updated 8 ಡಿಸೆಂಬರ್ 2012, 9:09 IST

ಮುಂಡರಗಿ:  ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಕಲೆ ಹೊರಹಾಕಲು ಪ್ರತಿಭಾ ಕಾರಂಜಿ ಒಂದು ಅತ್ಯತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದವರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮಕ್ಕಳ ಪ್ರತಿಭೆ ಗುರುತಿಸಿ ನಿಷ್ಪಕ್ಷ ಪಾತವಾಗಿ ನಿರ್ಣಯ ನೀಡಬೇಕು ಎಂದು ಸಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದರು.

ಸ್ಥಳೀಯ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೌಢ ಶಾಲಾ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ಅಧ್ಯಕ್ಷತೆ ವಹಿಸಿ  ಮತನಾಡಿದರು.

ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ  ಕೆಲವು ಇಲಾಖೆಗಳು ವಿವಿಧ ರೀತಿಯ ಸ್ಪರ್ಧೆ ಗಳನ್ನು ಏರ್ಪಡಿಸುತ್ತಿರುತ್ತವೆ. ಶಿಕ್ಷಕರು ಕಾಲಕಾಲಕ್ಕೆ ತಮ್ಮ ಶಾಲೆಯ ಮಕ್ಕಳನ್ನು ಅಂಥ ಸ್ಪರ್ಧೆಗಳಿಗೆ ಕಳುಹಿಸಿಕೊಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಕೊಳ್ಳುವಂತೆ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧೆಯಲ್ಲಿ ಸೋತ ಅಥವಾ ಬಹುಮಾನ ಪಡೆದುಕೊಳ್ಳದ ವಿದ್ಯಾರ್ಥಿಗಳು ನಿರಾಶರಾಗದೆ ಮುಂದಿನ ಸ್ಪರ್ಧೆಗೆ ತಯಾರಿ ನಡೆಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವುಗಳು ಸಹಜವಾಗಿದ್ದು, ಸೋಲನ್ನು ಮುಂದಿನ ಸ್ಪರ್ಧೆಯ ಮೆಟ್ಟಿಲೆಂದು ಭಾವಿಸಬೇಕು ಅಂದಾಗ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ. ತಾಲ್ಲೂಕು ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಬೇಕು ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಶಿಕ್ಷಕ ಆರ್. ಬಿ.ಮುಳ್ಳಳ್ಳಿ ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಹಾಗೂ ಆಯಾ ಶಾಲೆಯ ಶಿಕ್ಷಕರು ನಿರ್ಣಾಯಕರು ನೀಡುವ ತೀರ್ಪಿಗೆ ಸದಾ ಬದ್ಧರಾಗಿರಬೇಕು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಥಮ, ದ್ವಿತಿಯ ಹಾಗೂ ತೃತಿಯ ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಕ್ರಮವಾಗಿ 200, 150 ಹಾಗೂ 100ರೂಪಾಯಿ ಬಹುಮಾನ ನೀಡಲಾಗುವುದು ಎಂದು ಶಿಕ್ಷಣ ಸಂಯೋಜಕ ಕೆ.ಎಸ್.ಲಮಾಣಿ ತಿಳಿಸಿದರು. ಭಾಗ್ಯಲಕ್ಷ್ಮಿ ಇನಾಮತಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತಾರುಬಾಯಿ ಚವ್ಹಾಣ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿದರು. ಶಾಲಾ ಆಡಳಿತಾಧಿಕಾರಿ ಸಿ.ವಿ.ಇಟಗಿ, ವೈ.ಎಚ್.ಬಚನಳ್ಳಿ, ಎಲ್.ಎಚ್.ಎಣ್ಣಿ, ಪಿ.ಬಿ.ಹಿರೇಮಠ. ಭಾಗ್ಯಲಕ್ಷ್ಮಿ ಇನಾಮತಿ ಹಾಜರಿದ್ದರು.

ಪ್ರತಿಭಾ ಕಾರಂಜಿ ಸ್ಪರ್ಧೆಯ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಪಟ್ಟಣದ ಕೆ.ಜಿ.ಎಸ್ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಹಾಗೂ ಎಸ್.ಎಂ.ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ಮಟ್ಟದ ಸ್ಪರ್ಧೆಯನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.