ADVERTISEMENT

ಕೆಂಪು ಬಂಗಾರ’ಕ್ಕೆ ಭಾರೀ ಬೆಲೆ!

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:37 IST
Last Updated 9 ಡಿಸೆಂಬರ್ 2013, 5:37 IST
ಕೆಂಪು ಬಂಗಾರ’ಕ್ಕೆ ಭಾರೀ ಬೆಲೆ!
ಕೆಂಪು ಬಂಗಾರ’ಕ್ಕೆ ಭಾರೀ ಬೆಲೆ!   

ಲಕ್ಷ್ಮೇಶ್ವರ: ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದಾಗಿ ಈ ಭಾಗದಲ್ಲಿ ‘ಕೆಂಪು ಬಂಗಾರ’ ಎಂದೇ ಕರೆಯಲಾಗುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಮೆಣಸಿನಕಾಯಿ ಇಳುವರಿಯಲ್ಲಿ ತೀವ್ರ ಕುಸಿತ ಆಗದೆ. ಈಗಾಗಲೇ ಅದರ ಬೆಲೆ ಗಗನಕ್ಕೇರಿದೆ. ತಾಲ್ಲೂಕಿನ ಎರೆ ಭೂಮಿ ಹೊಂದಿರುವ ಬಸಾಪುರ, ರಾಮಗಿರಿ, ಮಾಡಳ್ಳಿ,  ಯಳವತ್ತಿ, ಯತ್ನಳ್ಳಿ, ಲಕ್ಷ್ಮೇಶ್ವರದ ಧರ್ಮಾಪುರ ಎರಿ, ಮಾಗಡಿ, ಗೊಜನೂರು, ಬಟ್ಟೂರು, ಪುಟಗಾಂವ್‌ ಬಡ್ನಿ, ದೊಡ್ಡೂರು ಸೇರಿದಂತೆ ಹತ್ತಾರು ಊರುಗಳ ನೂರಾರು ರೈತರು ಸಾವಿರಾರು ಹೆಕ್ಟೇರ್‌ನಲ್ಲಿ ಕಡ್ಡಾಯವಾಗಿ ಮೆಣಸಿನಕಾಯಿ ಬೆಳೆಯುತ್ತಾರೆ.

ಹದವರಿತು ಮಳೆಯಾದರೆ ಎಕರೆಗೆ ಕನಿಷ್ಠ ನಾಲ್ಕೈದು ಕ್ವಿಂಟಲ್‌ ಮೆಣಸಿನಕಾಯಿ ರೈತರ ಕೈ ಸೇರುತ್ತದೆ. ಆದರೆ ಈ ವರ್ಷ ಮಳೆ ಕೊರತೆಯಿಂದಾಗಿ ಈ ಬೆಳೆ ಹೇಳಿಕೊಳ್ಳವಷ್ಟು ಉತ್ತಮವಾಗಿಲ್ಲ. ಕಾರಣ ಮೆಣಸಿನಕಾಯಿಗೆ ಭಾರಿ ಹಿನ್ನಡೆ ಆಗಲಿದೆ. ಸಧ್ಯ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಲ್‌ಗೆ 16–17 ಸಾವಿರದವರೆಗೆ ಮಾರಾಟ ಆಗುತ್ತಿದೆ.

ಇದು ರೈತರಿಗೆ ಖುಷಿ ಕೊಡುವ ವಿಷಯವೇ. ಆದರೆ ಗ್ರಾಹಕರು ಮಾತ್ರ ದರ ಕೇಳಿಯೇ ಅವರ ಮುಖ ಖಾರ ತಿಂದಂತೆ ಆಗುತ್ತಿದೆ. ‘ಹ್ವಾದ ವರ್ಷದ ಮೆಣಸಿನಕಾಯಿ ಖಾಲಿ ಆಗ್ಯಾವು. ಈಗ ತಗೋಬೇಕಂದ್ರ ಕಿಲೋಕ್ಕೆ 180 ರೂಪಾಯಿ ಹೇಳ್ತಾರ್ರಿ’ ಎಂದು ಶುಕ್ರವಾರ ಲಕ್ಷ್ಮೇಶ್ವರದ ಸಂತೆಗೆ ಬಂದಿದ್ದ ಹೊನ್ನಪ್ಪ ರಾವಳ ಅಚ್ಚರಿ ವ್ಯಕ್ತಪಡಿಸಿದರು.

‘ಈಗ ರೈತರ ಮಾಲ ಬಂದಿಲ್ಲ. ಹಿಂಗಾಗಿ ಮೆಣಸಿನಕಾಯಿಗೆ ರೇಟ್‌ ಐತಿ. ಮುಂದ ಏಕದಮ್‌ ಮಾಲ ಬಂದಾಗ ರೇಟ್ನ ಕಡಿಮಿ ಮಾಡ್ತಾರ’ ಎಂದು ಮೆಣಸಿನಕಾಯಿ ಬೆಳೆಗಾರ ಕೊಕ್ಕರಗುಂದಿ ಗ್ರಾಮದ ಯುವ ರೈತ ವೀರನಗೌಡ ಪಾಟೀಲ ಹೇಳುತ್ತಾರೆ. ಇಡೀ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ ಎಲ್ಲ ರೈತರಿಗೂ ಉತ್ತಮ ದರ ದೊರೆಯುವದಿಲ್ಲ. ಹೀಗಾಗಿ ಈ ಭಾಗದಲ್ಲಿ ರೈತ ಹೋರಾಟಗಾರರು ಮೆಣಸಿನಕಾಯಿ ಮಂಡಳಿ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.