ADVERTISEMENT

ಕೈಗೆಟುಕದ ಎಳೆನೀರು: ಮುಂಡರಗಿ ಜನರು ತತ್ತರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:01 IST
Last Updated 16 ಡಿಸೆಂಬರ್ 2013, 6:01 IST

ಮುಂಡರಗಿ: ರೋಗಿಗಳಿಗೆ ಜೀವಜಲ ಎಂದೇ ಪರಿಗಣಿತವಾಗುವ ಎಳೆನೀರು (ತೆಂಗಿನಕಾಯಿ) ಬೆಲೆ ಗಗನಕ್ಕೆ ಏರುತ್ತಿದ್ದು, ನಿತ್ಯ ಎಳೆನೀರು ಕುಡಿಯುವ ಹವ್ಯಾಸ ಉಳ್ಳ ಜನರು ಮತ್ತು ಎಳೆನೀರನ್ನು ಅವಲಂಬಿಸಿರುವ ರೋಗಿ ಗಳು ಎಳೆನೀರಿನ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಒಂದು ಎಳೆನೀರಿನ ಬೆಲೆ 20 ರೂಪಾಯಿಗೆ ಮಾರಾಟವಾಗುತ್ತಿದ್ದು, ಬೇಸಿಗೆಯಲ್ಲಿ ಅದರ ಬೆಲೆ ಇನ್ನೂ ಹೆಚ್ಚಾಗುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಜನರು ಬಿಸಿಲಿನ ಮತ್ತು ದೇಹದ ತಾಪವನ್ನು ಕಡಿಮೆ ಮಾಡಿಕೊಳ್ಳಲು ಎಳೆನೀರಿನ ಮೊರೆ ಹೋಗುತ್ತಾರೆ. ಆದರೆ ಪ್ರಸ್ತುತ ಮೈಕೊರೆಯುವ ಚಳಿಯಲ್ಲಿಯೂ ಪಟ್ಟಣವು ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಎಳೆನೀರಿನ ವ್ಯಾಪಾರ ಭರದಿಂದ ಸಾಗಿದ್ದು, ಬೇಸಿಗೆ ಕಾಲದಲ್ಲಿ 25ರಿಂದ 30 ರೂಪಾಯಿ ಮಾರಾಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
.
ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಶಿಂಗಟಾಲೂರ, ಈರಣ್ಣನಗುಡ್ಡ, ಹಮ್ಮಿಗಿ, ಬಿದರಳ್ಳಿ ಮೊದಲಾದ ನದಿ ದಂಡೆಗಳ ಜಮೀನುಗಳಲ್ಲಿ ಹೇರಳವಾಗಿ ತೆಂಗು ಬೆಳೆಯಲಾಗುತ್ತಿದ್ದು, ಸ್ಥಳೀಯ ಎಳೆನೀರು ವ್ಯಾಪಾರಸ್ಥರು ಅಲ್ಲಿಂದ ಎಳೆನೀರನ್ನು ಖರೀದಿಸಿ ತರುತ್ತಿದ್ದಾರೆ. ರೈತರಿಂದ 12–13 ರೂಪಾಯಿಗೆ ಒಂದರಂತೆ ಎಳೆನೀರು ಖರೀದಿಸುವ ವ್ಯಾಪಾರಸ್ಥರು ಸಾರಿಗೆ, ಕೂಲಿ ಕಾರ್ಮಿಕರ ವೇತನ ಹಾಗೂ ಮತ್ತಿತರ ಖರ್ಚು ವ್ಯಚ್ಚಗಳನ್ನೆಲ್ಲ ಕಳೆದು ಮಾರುಕಟ್ಟೆಯಲ್ಲಿ ಅವುಗಳನ್ನು 20 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.     
     
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗಂಗಾ ತಳಿ ಸೇರಿದಂತೆ ಉತ್ತಮ ಗುಣಮಟ್ಟದ ಮತ್ತು ದೊಡ್ಡ ಗಾತ್ರದ ವಿವಿಧ ತಳಿಗಳ ತೆಂಗಿನ ಎಳೆಗಾಯಿ ಗಳನ್ನು ಬೆಳೆಯಲಾಗುತ್ತಿದೆ. ಹೂವಿನ ಹಡಗಲಿ, ಮುಂಡರಗಿ, ಶಿರಹಟ್ಟಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇಲ್ಲಿಯ ಎಳೆನೀರಿಗೆ ಉತ್ತಮ ಬೇಡಿಕೆ ಇದೆ.

ಉತ್ತಮ ಗುಣಮಟ್ಟದ ಬಲಿತ ತೆಂಗಿನ ಕಾಯಿ ಮಾರಾಟ ಮಾಡು ವುದು ತೆಂಗು ಬೆಳೆಗಾರರಿಗೆ ಹೆಚ್ಚು ಖರ್ಚುದಾಯಕ ಮತ್ತು ನಷ್ಟವೆನಿಸ ತೊಡಗಿದೆ. ಬಲಿತ ತೆಂಗಿನ ಕಾಯಿಗಳು ಮಾರುಕಟ್ಟೆಯಲ್ಲಿ 10–12 ರೂಪಾಯಿಗೆ ಮಾತ್ರ ಮಾರಾಟ ವಾಗುತ್ತದೆ. ಎಳೆನೀರು 20 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ತೆಂಗು ಬೆಳೆಗಾರರು ಬಲಿತ ತೆಂಗಿನ ಕಾಯಿಗಳನ್ನು ಮಾರಾಟ ಮಾಡುವುದಕ್ಕಿಂತ ಎಳೆನೀರು ಮಾರಾಟ ಮಾಡುವುದೆ ಯೊಗ್ಯವೆಂದು ಭಾವಿಸಿದಂತಿದೆ.

ಅದರ ಜೊತೆಗೆ ಗಿಡದಲ್ಲಿ ತೆಂಗು ಬಲಿಯಲು ಹೆಚ್ಚು ದಿನಗಳು ಕಾಯಬೇಕಾಗುತ್ತದೆ. ಬಲಿತ ತೆಂಗಿನ ಕಾಯಿಗಳನ್ನು ಮಾರಾಟ ಮಾಡಲು ರೈತರು ತಾವೇ ಖರೀದಿದಾರರ ಬಳಿಗೆ ಹೋಗಬೇಕು, ತೆಂಗಿನ ಕಾಯಿಗಳನ್ನು ಮಾರಾಟ ಮಾಡಿ ಅವರು ಕೊಟ್ಟಾಗ ಹಣ ಪಡೆದುಕೊಳ್ಳಬೇಕು. ಅದರ ಜೊತೆಗೆ ತೆಂಗಿನ ಕಾಯಿಗಳನ್ನು ಗಿಡದಿಂದ ಇಳಿಸುವುದು, ಅವುಗಳ ಸಿಪ್ಪೆ ತಗೆಯುವುದು ಮೊದಲಾದ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು. ಇವೆಲ್ಲ ರಗಳೆಗಳಿಗಿಂತ ಸರಳವಾಗಿ ಎಳೆನೀರನ್ನು ಮಾರಾಟ ಮಾಡಮಾಡುವುದು ಬಹುತೇಕ ರೈತರಿಗೆ ಲಾಭವೆನಿಸಿದೆ.

‘ಮಾರ್ಕೆಟ್‌ನ್ಯಾಗ ಬಲಿತ ತೆಂಗಿನ ಕಾಯಿ ಕೇಳೊರ ಇಲ್ಲದಂಗಾಗೈತ್ರಿ. ನಾವಾಗೆ ಕೇಳಾಕ ಹೊದ್ರ ಬಾಯಿಗೆ ಬಂದಾಂಗ ರೇಟ್‌ ಕೇಳ್ತಾರ್ರಿ. ಎಳನೀರ ಯಾವಾಗರ ಮಾರಬಹುದು ಮತ್ತ ಯಾರಿಗೆರ ಮಾರಬಹುದು, ಇತ್ತಲಾಗ ಮಾಲು ಅತ್ತಲಾಗ ರೊಕ್ಕ, ಯಾವ ರಗಳಿ ಇಲ್ಲದಂಗ ರೊಕ್ಕ ಬರ್ತಾವ ಅದಕ್ಕ ಈಗೀಗ ಎಲ್ಲರೂ ಎಳನೀರ ಮಾರಾಕ ಹತ್ಯಾರ್ರಿ’ ಎಂದು  ಶಿಂಗಟಾಲೂರ ಗ್ರಾಮದ ರೈತ ಬೀರಪ್ಪ  ಪ್ರಜಾವಾಣಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.