ADVERTISEMENT

ಕ್ಯಾರಿಓವರ್ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:40 IST
Last Updated 13 ಜುಲೈ 2012, 8:40 IST

ಗದಗ: ಡಿಪ್ಲೊಮಾ ಶಿಕ್ಷಣದಲ್ಲಿ ಕ್ಯಾರಿಓವರ್ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕ್ಯಾರಿಓವರ್ ಬೇಕು ಎಂಬ ಘೋಷಣೆಗಳನ್ನು ಕೂಗಿದರು. ಡಿಪ್ಲೊಮಾ ವಿದ್ಯಾರ್ಥಿಗಳು ಮುಂದಿನ ವರ್ಗಕ್ಕೆ ಹೋಗಲು ಪ್ರಸಕ್ತ ವರ್ಷದ ಗೇಟ್ ವ್ಯವಸ್ಥೆ ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ಅಂದರೆ ಕನಿಷ್ಠ ನಾಲ್ಕು ವಿಷಯಗಳಿಗಿಂತಲೂ ಹೆಚ್ಚು ಉತ್ತೀರ್ಣರಾಗದೇ ಇದ್ದಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಜೀವನಕ್ಕೆ ದೊಡ್ಡ ಪೆಟ್ಟಾಗುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಬಹುತೇಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ. ಏಕೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಡಿಪ್ಲೊಮಾದಂತಹ ಕಠಿಣ ಮಾಧ್ಯಮಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಲಿದೆ. ಅಲ್ಲದೆ ಇತರೆ ಕಾರಣಗಳು ಇವೆ. ಆದ್ದರಿಂದ ಕಳೆದ ವರ್ಷದಂತೆ ಸುಪರ್ ಕ್ಯಾರಿಓವರ್ ವ್ಯವಸ್ಥೆ ಜಾರಿಗೊಳಿಸಬೇಕು ಅಥವಾ ಕನಿಷ್ಠ 14 ವಿಷಯಗಳವರೆಗೂ ಉತ್ತೀರ್ಣರಾಗದೇ ಇದ್ದರೂ ಮುಂದಿನ ತರಗತಿಗೆ ಪ್ರವೇಶ ನೀಡಬೇಕು ಎಂದು ಆಗ್ರಹಿಸಿದರು.

ಸುಪರ್ ಕ್ಯಾರಿಓವರ್ ಜಾರಿಗೆ ತರದೇ ಇದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಪರವಾಗಿ ಬೇಡಿಕೆ ಪತ್ರವನ್ನು ಎನ್‌ಎಸ್‌ಯುಐ ವಕ್ತಾರ ಮಂಜುನಾಥ ಮುಳಗುಂದ ತಹಶೀಲ್ದಾರ್‌ಗೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.