ADVERTISEMENT

ಗದಗ: ಬಿಸಿಲ ಧಗೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:34 IST
Last Updated 29 ಮಾರ್ಚ್ 2019, 14:34 IST
ಡಂಬಳದಲ್ಲಿ ಶುಕ್ರವಾರ ತುಂತುರು ಮಳೆ ಸುರಿಯಿತು
ಡಂಬಳದಲ್ಲಿ ಶುಕ್ರವಾರ ತುಂತುರು ಮಳೆ ಸುರಿಯಿತು   

ಗದಗ: ಬಿಸಿಲ ಧಗೆಯಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಶುಕ್ರವಾರ ಸಂಜೆ ಸುರಿದ ತುಂತುರು ಮಳೆ ತಂಪೆರೆದಿದೆ. ಗದಗ ನಗರ, ಡಂಬಳ ಹೋಬಳಿ, ಗಜೇಂದ್ರಗಡ ವ್ಯಾಪ್ತಿಯಲ್ಲಿ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದೆ.

ಗುರುವಾರ ನಗರದಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಗದುಗಿನಲ್ಲಿ 35ರಿಂದ 36 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ, ಕಳೆದೊಂದು ವಾರದಿಂದ ಉಷ್ಣಾಂಶದಲ್ಲಿ ದಿಢೀರ್‌ ಏರಿಕೆಯಾಗಿತ್ತು. ಅಸಹನೀಯ ಧಗೆಯಿಂದ ಜನರು ಕಂಗಟ್ಟಿದ್ದರು. ತುಂತುರು ಮಳೆಯಾದ ಬೆನ್ನಲ್ಲೇ ಉಷ್ಣಾಂಶದಲ್ಲಿ ಅಲ್ಪ ಇಳಿಕೆಯಾಗಿದೆ.

ಡ೦ಬಳ ಹೋಬಳಿ ಮೇವು೦ಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 20 ನಿಮಿಷ ಜೋರು ಗಾಳಿ, ಗುಡುಗು ಸಹಿತ ಮಳೆ ಸುರಿಯಿತು. ಗಜೇಂದ್ರಗಡದಲ್ಲೂ ಜಿಟಿ ಜಿಟಿ ಮಳೆಯಾಗಿದೆ. ಮಳೆಯಿಂದ ಬಹುತೇಕ ಗ್ರಾಮಗಳ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ಸುರಿದಿರುವುದು ಮತ್ತೆ ಜೀವಕಳೆ ಬಂದಂತಾಗಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ದಿನವಿಡೀ ಸೆಕೆಯಿಂದಾಗಿ ಜನರು ಪರದಾಡಿದರು. ಗುರುವಾರವೂ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗಿತ್ತು.

ಮಾವಿನ ಬೆಳೆಗೆ ಹಾನಿ

ರುವಾರ ರಾತ್ರಿ ಜಿಲ್ಲೆಯ ಕೆಲವೆಡೆ ರಭಸದ ಗಾಳಿ ಬೀಸಿದ್ದರಿಂದ ಮತ್ತು ಆಲಿಕಲ್ಲು ಮಳೆಯಿಂದ ಮಾವಿನ ಕಾಯಿಗಳು ಉದುರಿವೆ. ಬಲಿತು, ಕಟಾವು ಹಂತಕ್ಕೆ ಬಂದಿದ್ದ ಕಾಯಿಗಳು ಉದುರಿದ್ದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಗದಗ ತಾಲ್ಲೂಕಿನ ಹುಲಕೋಟಿ, ಹೊಸಳ್ಳಿ, ದುಂದೂರು ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಮಾವಿನ ಕಾಯಿಗಳು ಹಾನಿಗೀಡಾಗಿವೆ.ಜಿಲ್ಲೆಯಲ್ಲಿ 1247 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಇದರಲ್ಲಿ ಹುಲಕೋಟಿ ಭಾಗವೇ ಸಿಂಹಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.