ಗದಗ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಆರಂಭಿಸಿದ್ದ ಎರಡು ದಿನದ ಉಪವಾಸ ಬುಧವಾರ ಅಂತ್ಯವಾಯಿತು.
ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳ ನಡುವೆ ಮಧ್ಯಾಹ್ನದ ಹೊತ್ತಿಗೆ ಶ್ರೀರಾಮುಲು ಉಪವಾಸ ಕೊನೆಗೊಳಿಸಿದರು. ತೋಂಟದಾರ್ಯ ಮಠದ ಡಾ ತೋಂಟದ ಸಿದ್ಧಲಿಂಗ ಸ್ವಾಮೀಜಿ ಎಳನೀರು ಕುಡಿಸಿದರು.
ಸಾಂಕೇತಿಕವಾಗಿ ಶಂಖವನ್ನು ಊದಿದ ಶ್ರೀರಾಮುಲು, ಉಪವಾಸ ಅಂತ್ಯವಾಗಿದೆ; ಹೋರಾಟ ಆರಂಭವಾಗಿದೆ ಎಂದು ಘೋಷಣೆ ಮಾಡಿದರು. ನಂತರ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಲು ತಾವು ಸ್ಥಾಪನೆ ಮಾಡಲಿರುವ ಹೊಸ ಪಕ್ಷಕ್ಕೆ ಒಂದು ಅವಕಾಶ ಕೊಡಬೇಕು ಎಂದರು. ಎಲ್ಲ ಸರ್ಕಾರಗಳು ಅಮಾಯಕ ಜನರನ್ನು ವಂಚಿಸಿವೆ. ಮುಂದಿನ ಪೀಳಿಗೆಗೆ ಅಂತಹ ಸ್ಥಿತಿ ಬರುವುದು ಬೇಡ. ಅದಕ್ಕಾಗಿ ಇಂತಹ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ ಶ್ರೀರಾಮುಲು, ತಮ್ಮ ಕೊನೆಯುಸಿರು ಇರುವವರೆಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಿಂದ ಗೆದ್ದು ಹೋಗಿರುವ ಶಾಸಕರು ಹಾಗೂ ಸಂಸದರಿಗೆ ಇಚ್ಛಾಶಕ್ತಿ ಕೊರತೆ ಇದೆ. ಅವರಿಗೆ ಬದ್ಧತೆ ಇಲ್ಲ. ಆದ್ದರಿಂದಾಗಿಯೇ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದರು.
ಈ ಭಾಗದಲ್ಲಿ ಸರಿಯಾದ ರಸ್ತೆಗಳು ಇಲ್ಲ. ಕುಡಿಯಲು ನೀರು ಸಿಗುವುದಿಲ್ಲ. ಆತ್ಮಗೌರವ, ಸ್ವಾಭಿಮಾನ ಇರುವ ವ್ಯಕ್ತಿಗಳು ಕ್ರಿಯಾಶೀಲ ರಾಜಕಾರಣ ಮಾಡಿದಾಗ ಮಾತ್ರ ಉತ್ತರ ಭಾಗದ ಅಭಿವೃದ್ಧಿ ಸಾಧ್ಯ ಎಂದರು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ಉಲ್ಮಾ ಫೆಡರೇಶನ್ ಅಧ್ಯಕ್ಷ ಅಬು ತಾಲಿಬ್-ಎ-ರೆಹಮಾನಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.