ADVERTISEMENT

ಗೋಕುಲ್ ಎತ್ತಂಗಡಿಗೆ ಕಲ್ಲುಗಣಿ ಲಾಬಿ dist 2

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 21:35 IST
Last Updated 20 ಜನವರಿ 2011, 21:35 IST

ಅಕ್ರಮ ಅದಿರು ರಫ್ತು ಹಗರಣದ ತನಿಖಾ ತಂಡದಲ್ಲಿರುವ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಆರ್.ಗೋಕುಲ್ ಅವರ ವರ್ಗಾವಣೆಗೆ ಮತ್ತೊಮ್ಮೆ ಪ್ರಯತ್ನ ಆರಂಭವಾಗಿದೆ. ಸೀಬರ್ಡ್ ನೌಕಾ ನೆಲೆಯ ಅಸ್ತಿತ್ವಕ್ಕೆ ಸವಾಲಾಗಿದ್ದ ಕಲ್ಲು ಗಣಿಗಳ ವಿರುದ್ಧ ಸಮರ ಸಾರಿರುವ ಕಾರಣಕ್ಕಾಗಿ ಈಗ ‘ಕಲ್ಲು ಗಣಿ ಲಾಬಿ’ ಅವರನ್ನು ಎತ್ತಂಗಡಿ ಮಾಡಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಪ್ರಭಾವಿ ಕಲ್ಲು ಗಣಿ ಮಾಲೀಕರು ಮತ್ತು ಸಚಿವರೊಬ್ಬರು ಈಗ ಗೋಕುಲ್ ಅವರನ್ನು ಕಾರವಾರದಿಂದ ವರ್ಗಾವಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಮತ್ತು ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಒಮ್ಮೆ ಈ ಅಧಿಕಾರಿಯ ವರ್ಗಾವಣೆ ಪ್ರಸ್ತಾವವನ್ನು ನೇರವಾಗಿ ತಿರಸ್ಕರಿಸಿದ್ದಾರೆ.

ನೌಕಾಪಡೆ ಆತಂಕ: ‘ಕಾರವಾರದ ದಕ್ಷಿಣ ಭಾಗದಿಂದ ಅಂಕೋಲಾವರೆಗೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೌಕಾನೆಲೆ ಅಪಾಯದಲ್ಲಿದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸೇನಾ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವುದರಿಂದ ಕಂಪನದ ಪ್ರಮಾಣ ಹೆಚ್ಚಿದೆ. ಇದರಿಂದ ನೌಕಾ ನೆಲೆ ಮತ್ತು ಅಲ್ಲಿನ ಯಂತ್ರೋಪಕರಣಗಳಿಗೆ ಹಾನಿಯಾಗುವ ಸಂಭವವಿದೆ’ ಎಂದು 2010ರ ನವೆಂಬರ್ 26ರಂದು ಕಾರವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಸೀಬರ್ಡ್ ನೌಕಾನೆಲೆಯ ಮುಖ್ಯಸ್ಥ ಕ್ಯಾಪ್ಟನ್ ಎಸ್.ಕೆ.ಗುಡಿ ಆತಂಕ ವ್ಯಕ್ತಪಡಿಸಿದ್ದರು.

‘ಸ್ಫೋಟಕಗಳ ಅತಿಯಾದ ಬಳಕೆಯಿಂದ ನೌಕಾನೆಲೆಯ ಪರಿಸರವೂ ಕೆಟ್ಟು ಹೋಗುತ್ತಿದೆ. ಮಳೆಗಾಲದಲ್ಲಿ ಭಾರಿ ಭೂ ಕುಸಿತಕ್ಕೂ ಕಾರಣವಾಗುತ್ತಿದೆ. ನೌಕಾಪಡೆ ಸಿಬ್ಬಂದಿಯ ವಸತಿ ಪ್ರದೇಶದ ಸಮೀಪದಲ್ಲೇ ನಿರಂತರ ಸ್ಫೋಟ ನಡೆಸಲಾಗುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಕುಟುಂಬಗಳು ಮತ್ತು ಮಕ್ಕಳಿಗೆ ತೊಂದರೆ ಆಗುತ್ತಿದೆ. ತಕ್ಷಣವೇ ನೌಕಾನೆಲೆಯ ಸಮೀಪದಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.