ADVERTISEMENT

ಗೋಡೆ ಮೇಲೆ ಚಿತ್ತಾಪಹಾರಿ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:55 IST
Last Updated 15 ಅಕ್ಟೋಬರ್ 2012, 5:55 IST

ಗದಗ: ವೀರನಾರಾಯಣ ಗುಡಿ, ತ್ರಿಕುಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ಬಿಂಕದಕಟ್ಟಿ ಮೃಗಾಲಯ, ವೀರೇಶ್ವರ ಪುಣ್ಯಾಶ್ರಮ, ಜೋಗ ಜಲಪಾತ, ಯಕ್ಷಗಾನ, ಡೊಳ್ಳು ಕುಣಿತ, ಗೋಲಗುಂಬಜ್, ಪಟ್ಟದ ಕಲ್ಲು...

ಕಲೆ, ಸಂಸ್ಕೃತಿ ಮತ್ತು ಪ್ರೇಕ್ಷಣಿಯ ಸ್ಥಳಗಳನ್ನು ಒಂದೆಡೆ ನೋಡಿ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇರುವವರು  ನಗರದ ವೆಂಕಟೇಶ್ವರ ಚಿತ್ರ ಮಂದಿರದ ರಸ್ತೆಯಲ್ಲಿರುವ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಗೆ ಒಮ್ಮೆ ಭೇಟಿ ನೀಡಿ. ಬಹುತೇಕ ಕಡೆ ಗೋಡೆಗಳಿಗೆ ಭಿತ್ತಿಪತ್ರ ಅಂಟಿಸಿ ವಿರೂಪಗೊಳಿಸಿರುವುದು, ತ್ಯಾಜ್ಯ ಬಿಸಾಡಿರುವ ದೃಶ್ಯ ಕಾಣಬಹುದು. ಆದರೆ ಹುಲಕೋಟಿ ಸಂಸ್ಥೆ ಇದಕ್ಕೆ ಅಪವಾದ.

ಸಂಸ್ಥೆಯ ಮುಖ್ಯಸ್ಥ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರ ಕನಸಿನ ಯೋಜನೆಯಂತೆ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಂಸ್ಥೆಯ ರಕ್ಷಣಾ ಗೋಡೆಗಳ ಮೇಲೆ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ನಗರದ ಸೌಂದರ್ಯವು ಹೆಚ್ಚುತ್ತದೆ ಹಾಗೂ ವಿದ್ಯಾರ್ಥಿಗಳಿಗೂ ಮಾಹಿತಿ ದೊರೆಯುತ್ತದೆ. ಜತೆಗೆ ಸ್ಥಳೀಯ ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.

1921ರಲ್ಲಿ ಆರಂಭಗೊಂಡ ಹುಲಕೋಟಿ ಶಿಕ್ಷಣ ಸಂಸ್ಥೆಯ ಅಡಿ ಇರುವ  ಪ್ರಾಥಮಿಕ ಶಾಲೆ, ಪದವಿ ಮತ್ತು ಕಾನೂನು ಕಾಲೇಜುಗಳಲ್ಲಿ ಅಂದಾಜು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯ 500 ಅಡಿ ಉದ್ದದ ರಕ್ಷಣಾ ಗೋಡೆಯಲ್ಲಿ  ಒಟ್ಟು 52 ಬ್ಲಾಕ್‌ಗಳು ಇವೆ. 2011ರಲ್ಲಿಯೇ ಈ ಯೋಜನೆ ಜಾರಿಗೆ ತಂದು ಬಲ ಭಾಗದ ಬ್ಲಾಕ್‌ಗಳಲ್ಲಿ ಚಿತ್ರಗಳನ್ನು ಬಿಡಿಸಲಾಯಿತು.

ಈಗ ಎಡಭಾಗದ ಬ್ಲಾಕ್‌ಗಳಲ್ಲಿ ಚಿತ್ರಗಳನ್ನು ಬಿಡಿಸುವ ಕಾರ್ಯ ಭರದಿಂದ ಸಾಗಿದೆ. ಒಂದೊಂದು ಬ್ಲಾಕ್‌ನಲ್ಲಿನ ಚಿತ್ರ ನೋಡುತ್ತಿದ್ದರೆ ಆ ಸ್ಥಳಕ್ಕೆ ಭೇಟಿ ನೀಡಿದಷ್ಟೇ ಅನುಭವವಾಗುತ್ತದೆ. ಅಷ್ಟರ ಮಟ್ಟಿಗೆ ಕಲಾವಿದರು ಕೈ ಚಳಕ ತೋರಿಸಿದ್ದಾರೆ.

ಕಲಾವಿದರ ಕುಂಚದಿಂದ ಐತಿಹಾಸಿಕ ಗುಡಿಗಳು, ಜಾನಪದ ವೈವಿಧ್ಯ, ಕಾಟನ್ ಸೇಲ್ ಸೊಸೈಟಿ, ವಿವೇಕಾನಂದ ಆಶ್ರಮ, ಲಕ್ಕಂಡಿ ಕೆರೆ,  ಹಂಪಿ ತೇರು, ಶಿಲಾ ಬಾಲಕಿ, ಗೋ ಮಾತೆ ಪೂಜಿಸು ವುದು, ವನ್ಯ ಜೀವಿಗಳ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ. ರಸ್ತೆಯಲ್ಲಿ ಓಡಾಡುವವರು ಗೋಡೆಗಳ ಮೇಲೆ ಒಂದು ಕ್ಷಣ ಕಣ್ಣು ಹಾಯಿಸಿ ಹೋಗುವುದು ಉಂಟು. ಗದುಗಿನ ಪ್ರವಾಸಿ ತಾಣಗಳಲ್ಲದೆ ರಾಜ್ಯದ ಇತರೆ ಜಿಲ್ಲೆಗಳ ಪ್ರೇಕ್ಷಣಿಯ ಸ್ಥಳಗಳ ಚಿತ್ರಗಳು ಇಲ್ಲಿದೆ.

`ಖಾಲಿ ಗೋಡೆ ನೋಡಿದರೆ ಭಿತ್ತಿ ಪತ್ರ ಅಂಟಿಸುವುದು, ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುವುದು ಸಾಮಾನ್ಯ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಸ್ಥಳೀಯ ಪ್ರವಾಸಿ ತಾಣ, ಕಲೆ ಮತ್ತು ಸಂಸ್ಕೃತಿಯ ಕುರಿತು  ಮಾಹಿತಿ ನೀಡುವ ಉದ್ದೇಶದಿಂದ ಎಚ್. ಕೆ. ಪಾಟೀಲ ಈ ಯೋಜನೆ ರೂಪಿಸಿದರು. ಅಂದಾಜು 85 ಸಾವಿರ ವೆಚ್ಚದಲ್ಲಿ 52 ಬ್ಲಾಕ್‌ಗಳಲ್ಲೂ ಚಿತ್ರ ಬಿಡಿಸಲಾಗುತ್ತಿದೆ.

ಇತರ ಶಿಕ್ಷಣ ಸಂಸ್ಥೆಗಳಿಗೂ ನಮ್ಮ ಸಂಸ್ಥೆ ಮಾದರಿಯಾಗಬೇಕು. ಚಿತ್ರಕಲಾ ಶಿಕ್ಷಕರಿಗೆ ಅವಕಾಶ ನೀಡುವುದರ ಜತೆಗೆ ನಗರವು ಸುಂದರ ವಾಗಿ ಕಾಣುತ್ತದೆ. ಪ್ರವಾಸಿಗರಿಗೆ ಮಾಹಿತಿ ನೀಡುವ ಸಲುವಾಗಿ ಒಬ್ಬರನ್ನು ನೇಮಿಸಲಾಗಿದೆ. ನಗರಸಭೆಯು  ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು~  ಎಂದು ಸಂಸ್ಥೆಯ ಆಡಳಿತಾಧಿಕಾರಿ ಕೆ.ಬಿ. ತಳಗೇರಿ ಮತ್ತು ದೈಹಿಕಶಿಕ್ಷಣ ಉಪನ್ಯಾಸಕ ಶಶಿಕಾಂತ ಕೊರ್ಲ ಹಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.