ADVERTISEMENT

ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:25 IST
Last Updated 12 ಫೆಬ್ರುವರಿ 2011, 8:25 IST

ಲಕ್ಷ್ಮೇಶ್ವರ: ಸಮೀಪದ ಗೋವನಾಳ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕ್ಕೊಳ್ಳ ಲಾದ ಅಭಿವೃದ್ಧಿ ಕಾಮಗಾರಿ  ಅಡಿಗಲ್ಲು  ಸಮಾರಂಭದಲ್ಲಿ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ  ಕಾಂಗ್ರೆಸ್ ಯುವ ಮುಖಂಡರು, ಶುಕ್ರವಾರ ರಾಮಗಿರಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ನಂತರ ರಾಮಗಿರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ ಹಾಗೂ ಮಾಜಿ ಸದಸ್ಯ ನಾಗರಾಜ ದೊಡ್ಡಮನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುದಾನ ಕೇಂದ್ರ ಸರ್ಕಾರದ್ದಾಗಿದೆ. ಆದರೆ ಬಿಜೆಪಿ ಬೆಂಬಲಿತ ಕೆಲವು ಸದಸ್ಯರು ಶಾಸಕರನ್ನು ಆಮಂತ್ರಿಸಿ ಅವರಿಂದ ಕಾಮಗಾರಿಗೆ ಭೂಮಿಪೂಜೆ ಮಾಡಿಸುತ್ತಿರುವುದು ಸರಿಯಾದ ಕ್ರಮವಲ್ಲ. ಅಲ್ಲದೆ ಇದೇ ಸಮಾರಂಭದಲ್ಲಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಸನ್ಮಾನಿಸುತ್ತಿರುವುದು ಹಾಗೂ ತಾಲ್ಲೂಕಿನ ಅಧಿಕಾರಿಗಳು ಬಿಜೆಪಿಯ ಈ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುತ್ತಿರುವುದು ತೀರಾ ಖಂಡನೀಯ’ ಎಂದರು. 

 ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರನ್ನು ವಿಚಾರಿಸಿದಾಗ ‘ಕೇವಲ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದ್ದರೆ ಹೊರತು ಅಧಿಕಾರಿಗಳ ಹೆಸರು ಹಾಕಿ ಆಮಂತ್ರಣ ಪತ್ರಿಕೆ ಪ್ರಕಟ ಮಾಡುವುದು ತಮ್ಮ ಗಮನಕ್ಕೆ ಬಂದಿಲ್ಲ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ಮಡಿವಾಳರ, ನೀಲೇಶ ಕಾಳೆ, ಹನಮವ್ವ ಬೆಟದೂರ, ಗುಡ್ಡಪ್ಪ ಬೇವಿನಮರದ, ಬಿ.ಎನ್. ಅತ್ತಿಗೇರಿ, ಮಾಲತೇಶ ಕಾಳೆ, ಪುಟ್ಟಪ್ಪ ಯಂಗಾಡಿ, ಯಲ್ಲಪ್ಪ ಕಾಳಿ, ಭೀಮಪ್ಪ ಯಂಗಾಡಿ, ಮಂಜುನಾಥ ಜುಲ್ಪಿ, ಚೆನ್ನಪ್ಪ ಪೂಜಾರ, ಸಹದೇವಪ್ಪ ಗೋಮಪ್ಪನವರ, ಪರಶುರಾಮ ಲಕ್ಕಣ್ಣವರ, ಯಲ್ಲಪ್ಪ ಹುಣಸಿಮರದ, ಮೈಲಾರೆಪ್ಪ ದೊಡ್ಡಮನಿ, ಸಿದ್ದು ಕಾಳೆ, ಹನಮಂತಪ್ಪ ಕರೆಪ್ಪನವರ, ಬಸವರಾಜ ಬನ್ನಿಕೊಪ್ಪ, ಈರನಗೌಡ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.